ಚಿಕ್ಕಮಗಳೂರು : ಕಾಡಾನೆ ದಾಳಿಯಿಂದ ಮಹಿಳೆ ಸಾವಿಗೀಡಾದ ಘಟನೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಗುಂಪೊಂದು ದಾಳಿ ನಡೆಸಿ ಅವರ ಬಟ್ಟೆಯನ್ನೂ ಹರಿದು ಹಾಕಿರುವ ಆರೋಪ ಕೇಳಿಬಂದಿದೆ.
ಘಟನೆ ಕುರಿತು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಹುಚ್ಚು ನಾಯಿ ರೀತಿ ಅಟ್ಟಾಡಿಸಿದರು. ಜನರು ನನಗೆ ಚಪ್ಪಲಿಯಲ್ಲಿ ಹೊಡೆದರು. ನಾನೇ ಓಡಿ ಬಂದು ಕಾರಿನಲ್ಲಿ ಕುಳಿತುಕೊಂಡೆ, ಜೀಪಿನ ಮೇಲೆ ಕಲ್ಲಿನಿಂದ ಹೊಡೆದರು ಎಂದು ಘಟನೆಯ ಭಯಾನಕ ಅನುಭವವನ್ನು ಕುಮಾರಸ್ವಾಮಿ ಬಿಚ್ಚಿಟ್ಟಿದ್ದಾರೆ.
ಇದು ಕಾಡಾನೆ ಪ್ರಕರಣವಲ್ಲ, ರಾಜಕೀಯ ದಾಳಿ ಎಂದೆನಿಸುತ್ತದೆ. ಬಟ್ಟೆ ಹರಿದ್ರೆ ನಾನು ನೂರು ಬಟ್ಟೆ ತರುತ್ತೇನೆ, ಘಟನೆಯಲ್ಲಿ ಜನರು ನನಗೆ ಮಾತ್ರವಲ್ಲ ಪೊಲೀಸರಿಗೂ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ನಾನು ಚುನಾವಣೆಗೆ ನಿಲ್ಲಬಾರದು ಎಂದು ಸಂಚು ರೂಪಿಸಿ ಹಲ್ಲೆ ಮಾಡಿದ್ದಾರೆ. ನನ್ನ ಮೂಲಕ ಎಲ್ಲಾ ಶಾಸಕರಿಗೂ ಭದ್ರತೆ ನೀಡಬೇಕು, ನಾನು ಸರ್ಕಾರಕ್ಕೆ ದೂರು ನೀಡುತ್ತೇನೆ ಎಂದು ಹೇಳಿದರು.
ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಕಾಡಾನೆ ದಾಳಿಯಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ಸ್ಥಳಕ್ಕೆ ತಡವಾಗಿ ಬಂದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮೇಲೆ ಹಲ್ಲೆ ಮಾಡಿ ಬಟ್ಟೆಯನ್ನು ಹರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕಾಡಾನೆ ದಾಳಿಯಿಂದಾಗಿ ಶೋಭಾ ಮೃತಪಟ್ಟಿದ್ದರು. ಘಟನೆ ಬೆಳಗ್ಗೆ ನಡೆದಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಂಜೆ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕ ಕುಮಾರಸ್ವಾಮಿ ಅವರಿಗೆ ಘೇರಾವ್ ಹಾಕಿದಲ್ಲದೆ. ಗ್ರಾಮದ ಮುಖ್ಯರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಬಂದಿದ್ದಾರೆ. ತೀವ್ರ ಅಕ್ರೋಶಗೊಂಡಿದ್ದ ಕೆಲ ಗ್ರಾಮಸ್ಥರು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ. ಶಾಸಕರನ್ನು ಹಿಡಿದು ಎಳೆದಾಡಿದ್ದಾರೆ.
ಮಂಗಳೂರು ಸ್ಪೋಟ : ಉಗ್ರರನ್ನು ಗುಂಡು ಹೊಡೆದು ಸಾಯಿಸಬೇಕು ; ಕೆ.ಎಸ್ ಈಶ್ವರಪ್ಪ ಗುಡುಗು
.