ಮಂಗಳೂರು: ರಕ್ಷಣೆ ನೀಡಬೇಕಾದ ಪೊಲೀಸರೇ ಭಕ್ಷಕರಾದರೇ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ದೂರು ನೀಡಲು ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಘಟನೆಯ ಹಿನ್ನೆಲೆ: ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳು ಕೇಳಿಬಂದಿವೆ. ದೂರು ನೀಡಲು ಬಂದ ಮಹಿಳೆಯೊಬ್ಬರನ್ನು ಬ್ಲಾಕ್‌ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಮತ್ತೊಬ್ಬ ಸಂತ್ರಸ್ತ ಮಹಿಳೆಯ ಪತಿಯನ್ನು ಪ್ರಕರಣವೊಂದರಲ್ಲಿ ಸಿಲುಕಿಸಿ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿಬಂದಿದೆ. “ಪತಿಯನ್ನು ಬಿಡುಗಡೆ ಮಾಡಲು 25 ಲಕ್ಷ ರೂಪಾಯಿ ನೀಡಬೇಕು ಅಥವಾ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಬೇಕು” ಎಂದು ಆತ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ಅಪ್ರಾಪ್ತ ಪುತ್ರಿಯ ಮೇಲೆಯೂ ಈತ ಕಣ್ಣು ಹಾಕಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಕಮಿಷನರ್ ಕಡಕ್ ಆ್ಯಕ್ಷನ್: ಈ ಘೋರ ಕೃತ್ಯದ ಬಗ್ಗೆ ಸಂತ್ರಸ್ತೆಯರು ಅಧಿಕೃತವಾಗಿ ದೂರು ನೀಡಿರಲಿಲ್ಲವಾದರೂ, ಪ್ರಕರಣದ ಗಂಭೀರತೆಯನ್ನು ಮನಗಂಡ ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ತನಿಖೆಗೆ ಆದೇಶ: ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ. ಇಲಾಖೆಯ ಒಳಗಿನ ಶಿಸ್ತು ಮತ್ತು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಂತ್ರಸ್ತೆಯರಿಗೆ ಮನವಿ: ಲೈಂಗಿಕ ಕಿರುಕುಳದ ಕುರಿತು ಈವರೆಗೆ ಯಾವುದೇ ಮಹಿಳೆಯರು ನೇರವಾಗಿ ದೂರು ಸಲ್ಲಿಸಿಲ್ಲ. ಹೀಗಾಗಿ, ಇನ್ಸ್‌ಪೆಕ್ಟರ್ ಸಂದೇಶ್ ಅವರಿಂದ ಕಿರುಕುಳಕ್ಕೊಳಗಾದ ಇನ್ಯಾರಾದರೂ ಸಂತ್ರಸ್ತೆಯರು ಇದ್ದಲ್ಲಿ, ನಿರ್ಭಯವಾಗಿ ಮುಂದೆ ಬಂದು ದೂರು ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇದು ಪ್ರಾಥಮಿಕ ವರದಿ ಮತ್ತು ಆರೋಪಗಳ ಆಧಾರಿತ ಸುದ್ದಿಯಾಗಿದೆ. ತನಿಖೆಯ ನಂತರ ಹೆಚ್ಚಿನ ಸತ್ಯಾಸತ್ಯತೆ ಹೊರಬರಲಿದೆ.
ಜಿಯೋ ಪೇಮೆಂಟ್ಸ್ ಬ್ಯಾಂಕ್ ಬಳಕೆದಾರರಿಗೆ ಗುಡ್ ನ್ಯೂಸ್; ಯುಪಿಐ ಆಧಾರಿತ ನಗದು ಹಿಂಪಡೆಯುವ ಸೇವೆ ಪರಿಚಯ
BREAKING : ಎಲ್ಲಾ ಗ್ರಾಹಕರಿಗೆ ‘eKYC, ಆಧಾರ್ ದೃಢೀಕರಣ’ ಅಗತ್ಯವಿಲ್ಲ ; ಕೇಂದ್ರ ಸರ್ಕಾರ ಸ್ಪಷ್ಟನೆ








