ಕೆಲವು ತಿಂಗಳುಗಳ ಹಿಂದೆ ‘ಕಾಂತಾರ’ ಚಿತ್ರದ ದೈವಾರಾಧನೆಯ ದೃಶ್ಯಗಳನ್ನು ಅನುಕರಿಸಿ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಈಗ ಅದೇ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಣವೀರ್ ನಟನೆಯ ಹೊಸ ಚಿತ್ರ ‘ಧುರಂಧರ್: ದಿ ರಿವೆಂಜ್’ (Dhurandhar 2) ವೀಕ್ಷಿಸಿದ ರಿಷಬ್, ಚಿತ್ರದ ಮೇಕಿಂಗ್ ಮತ್ತು ರಣವೀರ್ ಅಭಿನಯಕ್ಕೆ ಮನಸೋತಿದ್ದಾರೆ.
ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಿಷಬ್ ಶೆಟ್ಟಿ, “ಧುರಂಧರ್: ದಿ ರಿವೆಂಜ್ ಚಿತ್ರದ ಮೊದಲ ದೃಶ್ಯವೇ ನಿಮ್ಮನ್ನು ಸೆಳೆಯುತ್ತದೆ. ಪ್ರತಿ ಫ್ರೇಮ್ ಕೂಡ ಯುದ್ಧದ ನಗಾರಿ ಬಾರಿಸಿದ ಅನುಭವ ನೀಡುತ್ತದೆ. ಇದೊಂದು ಕೇವಲ ಸೀಕ್ವೆಲ್ ಅಲ್ಲ, ಇದೊಂದು ಸ್ಟೇಟ್ಮೆಂಟ್!” ಎಂದು ಹೊಗಳಿದ್ದಾರೆ.
ನಿರ್ದೇಶಕ ಆದಿತ್ಯ ಧರ್ ಅವರ ಕಥೆ ಹೇಳುವ ಶೈಲಿ ಮತ್ತು ಚಿತ್ರದ ಡೀಟೇಲಿಂಗ್ ಬಗ್ಗೆ ರಿಷಬ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚಿತ್ರದ ಸಂಗೀತ ಮತ್ತು ಎಡಿಟಿಂಗ್ ಕೆಲಸವನ್ನು ‘ಟಾಪ್-ನಾಚ್’ ಎಂದು ಕರೆದಿದ್ದಾರೆ.
ಈ ಹಿಂದೆ ಗೋವಾದ ಐಎಫ್ಎಫ್ಐ (IFFI) ವೇದಿಕೆಯಲ್ಲಿ ರಣವೀರ್ ಸಿಂಗ್ ಅವರು ಕಾಂತಾರ ಚಿತ್ರದ ದೈವದ ಕೂಗನ್ನು ಹಾಸ್ಯಭರಿತವಾಗಿ ಅನುಕರಿಸಿದ್ದರು. ಇದು ಕರಾವಳಿಯ ಜನರ ಕೆಂಗಣ್ಣಿಗೆ ಗುರಿಯಾಗಿತ್ತು ಮತ್ತು ರಣವೀರ್ ಕ್ಷಮೆಯನ್ನೂ ಕೇಳಿದ್ದರು. ಈಗ ರಿಷಬ್ ಅವರ ಈ ಪ್ರಶಂಸೆ ಇಬ್ಬರ ನಡುವಿನ ಸಂಬಂಧ ಸುಧಾರಿಸಿರುವುದನ್ನು ಸೂಚಿಸುತ್ತಿದೆ.








