ನವದೆಹಲಿ: ದೇಶದ ಕೃಷಿ ವಲಯ ಹಾಗೂ ಆರ್ಥಿಕತೆಯ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಮಾರುತಗಳು ಈ ಬಾರಿ ನಿಗದಿತ ಸಮಯಕ್ಕಿಂತ ಒಂದು ವಾರ ಮೊದಲೇ ಅಪ್ಪಳಿಸುವ ಮುನ್ಸೂಚನೆ ಸಿಕ್ಕಿದೆ. ಸಾಮಾನ್ಯವಾಗಿ ಮೇ 22ರ ಸುಮಾರಿಗೆ ಅಂಡಮಾನ್ ಪ್ರವೇಶಿಸುತ್ತಿದ್ದ ಮಾರುತಗಳು, ಈ ಬಾರಿ ಮೇ 17ರಂದೇ ದಕ್ಷಿಣ ಬಂಗಾಳ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ.
ವಾಡಿಕೆಗಿಂತ ಐದಾರು ದಿನ ಮುಂಚಿತವಾಗಿ ಅಂದರೆ ಈ ವಾರದ ಅಂತ್ಯದೊಳಗೆ ಮುಂಗಾರು ಅಂಡಮಾನ್ ತಲುಪಲಿದೆ. ಅಂಡಮಾನ್ ನಂತರ ಮಾರುತಗಳು ಕೇರಳದತ್ತ ಮುಖ ಮಾಡಲಿವೆ. ಸಾಮಾನ್ಯವಾಗಿ ಜೂನ್ 1ಕ್ಕೆ ಕೇರಳ ಪ್ರವೇಶಿಸುವ ಮುಂಗಾರು, ಈ ಬಾರಿ ಮೇ ಅಂತ್ಯದಲ್ಲೇ ಅಲ್ಲಿಗೆ ತಲುಪುವ ನಿರೀಕ್ಷೆಯಿದೆ.
ಕರ್ನಾಟಕಕ್ಕೆ ಯಾವಾಗ?
ಕೇರಳಕ್ಕೆ ಮಳೆ ಬಂದ 3 ರಿಂದ 4 ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದ್ದು, ಇದರೊಂದಿಗೆ ರಾಜ್ಯದಲ್ಲಿ ನಾಲ್ಕು ತಿಂಗಳ ಸುದೀರ್ಘ ಮಳೆಗಾಲ ಅಧಿಕೃತವಾಗಿ ಆರಂಭವಾಗಲಿದೆ.ಹವಾಮಾನ ಇಲಾಖೆಯ ಈ ಮುನ್ಸೂಚನೆಯು ರೈತರಲ್ಲಿ ಸಂತಸ ತಂದಿದ್ದು, ಮುಂಚಿತವಾಗಿ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಪೂರಕವಾಗಲಿದೆ. ಬಂಗಾಳ ಉಪಸಾಗರದಲ್ಲಿ ಉಂಟಾಗಿರುವ ಹವಾಮಾನ ಬದಲಾವಣೆಗಳು ಮುಂಗಾರು ಮಾರುತಗಳ ವೇಗಕ್ಕೆ ಸಹಕಾರಿಯಾಗಿವೆ ಎಂದು ವಿಶ್ಲೇಷಿಸಲಾಗಿದೆ.








