ಮೈಸೂರು: ಕೇರಳದಲ್ಲಿ ಮಂಕಿ ಫಾಕ್ಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲೆ ಕರ್ನಾಟಕ ಕೇರಳ ಗಡಿ ಚೆಕ್ ಪೋಸ್ಟ್ ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಹೆಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ಗೆ ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ. ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಹೆಚ್ ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದ ತಂಡದಿಂದ ಪರಿಶೀಲನೆ ನಡೆಯುತ್ತಿದೆ. ಕೇರಳದಿಂದ ಬರುವ ಪ್ರಯಾಣಿಕರ ತಪಾಸಣೆಗಾಗಿ ಎರಡು ತಂಡ ನಿಯೋಜಿಸಲಾಗಿದೆ.
ಕಾಡು ಪ್ರಾಣಿಗಳಿಂದಲೂ ಮಂಕಿಫಾಕ್ಸ್ ಹರಡುವ ಭೀತಿ ಎದುರಾಗಿದೆ. ಡಿ.ಬಿ ಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ತಂಡ ಬೀಡುಬಿಟ್ಟಿದೆ. ಪ್ರಯಾಣಿಕರ ತಪಾಸಣೆ ಮಾಡಿ ರೋಗ ಲಕ್ಷಣಗಳು ಕಂಡುಬಂದರೆ ವರದಿ ನೀಡುವಂತೆ ಹೆಚ್ ಡಿ ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್ ಸೂಚನೆ ನೀಡಿದ್ದಾರೆ.