ಚೆನ್ನೈ:ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯುವಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಯಶಸ್ವಿಯಾಗಿದೆ. ತನ್ನ ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಸಾಧನೆ ಮಾಡಿರುವ ಪಕ್ಷವು ದ್ರಾವಿಡ ನೆಲದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ. ಈ ಐತಿಹಾಸಿಕ ಗೆಲುವಿನ ನಂತರ ಸಂಭ್ರಮದಲ್ಲಿರುವ ವಿಜಯ್, “ಈ ಫಲಿತಾಂಶದಿಂದ ಹಣದ ರಾಜಕಾರಣ ಹೂತುಹೋಗಿದೆ” ಎಂದು ಗುಡುಗಿದ್ದಾರೆ.
ರಾಜಕೀಯಕ್ಕೆ ಪ್ರವೇಶಿಸಿದ ಕೆಲವೇ ತಿಂಗಳಲ್ಲಿ ಚುನಾವಣೆಯನ್ನು ಎದುರಿಸಿದ್ದ ವಿಜಯ್ ಅವರ ಪಕ್ಷವು, ತಮಿಳುನಾಡಿನ ಪ್ರಬಲ ರಾಜಕೀಯ ಪಕ್ಷಗಳಿಗೆ ಅಚ್ಚರಿಯ ಪೈಪೋಟಿ ನೀಡಿ ಗೆಲುವಿನ ನಗೆ ಬೀರಿದೆ.”ಈ ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಹಂಚಿದವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಪ್ರಾಮಾಣಿಕತೆ ಮತ್ತು ಬದಲಾವಣೆಯ ಆಶಯಕ್ಕೆ ಸಿಕ್ಕ ಜಯವಿದು” ಎಂದು ವಿಜಯ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.
“ನನ್ನನ್ನು ನಂಬಿದ ತಮಿಳುನಾಡಿನ ಪ್ರತಿ ಮಗನಿಗೂ ಮತ್ತು ಮಗಳಿಗೂ ನಾನು ಋಣಿಯಾಗಿದ್ದೇನೆ. ನಿಮ್ಮ ನಂಬಿಕೆಯನ್ನು ಎಂದಿಗೂ ಉಳಿಸಿಕೊಳ್ಳುತ್ತೇನೆ” ಎಂದು ವಿಜಯ್ ಭಾವನಾತ್ಮಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.








