ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದ ನಡುವೆಯೇ, ಇರಾನ್‌ನ ಆಂತರಿಕ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ವರದಿಗಳು ಹೊರಬರುತ್ತಿವೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಮೊಜ್ತಬಾ ಖಮೇನಿ (Mojtaba Khamenei) ಜೀವಂತವಾಗಿದ್ದಾರೆ, ಆದರೆ ದೇಶದ ಆಡಳಿತ ವ್ಯವಸ್ಥೆಯ ಮೇಲೆ ಅವರಿಗಿದ್ದ ಹಿಡಿತ ಸಂಪೂರ್ಣವಾಗಿ ತಪ್ಪಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಕೆಲವು ವಾರಗಳಿಂದ ಮೊಜ್ತಬಾ ಅವರು ಇಸ್ರೇಲ್ ದಾಳಿಯಲ್ಲಿ ಹತರಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಶನಿವಾರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಆದರೆ, ಅವರು ಮೊದಲಿನಂತೆ ಅಧಿಕಾರ ಚಲಾಯಿಸುತ್ತಿಲ್ಲ ಎಂಬುದು ಈಗಿನ ದೊಡ್ಡ ಚರ್ಚೆಯಾಗಿದೆ.
ಇರಾನ್‌ನ ಪ್ರಭಾವಿ ಸೇನಾ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನಾಯಕತ್ವವು ಈಗ ಖಮೇನಿ ಕುಟುಂಬದ ಮಾತು ಕೇಳುತ್ತಿಲ್ಲ ಎಂಬ ಅನುಮಾನಗಳು ದಟ್ಟವಾಗಿವೆ. ಯುದ್ಧದ ನಿರ್ಧಾರಗಳನ್ನು ಈಗ ಕೇವಲ ಮಿಲಿಟರಿ ಜನರಲ್‌ಗಳೇ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ನಡೆಸಿದ ಸರಣಿ ದಾಳಿಗಳಿಂದ ಇರಾನ್‌ನ ರಕ್ಷಣಾ ವ್ಯವಸ್ಥೆ ಜರ್ಝರಿತವಾಗಿದೆ. ಈ ವೈಫಲ್ಯಕ್ಕೆ ಅಲಿ ಖಮೇನಿ ಅವರ ಮಗನ ಹಸ್ತಕ್ಷೇಪವೇ ಕಾರಣ ಎಂದು ಸೇನೆಯ ಒಂದು ವರ್ಗ ಅಸಮಾಧಾನಗೊಂಡಿದೆ. ಇದು ಇರಾನ್‌ನಲ್ಲಿ “ಸೇನಾ ದಂಗೆ”ಯ ಮುನ್ಸೂಚನೆಯೇ ಎಂಬ ಪ್ರಶ್ನೆ ಮೂಡಿಸಿದೆ.








