ಸಾಗರ : ಪ್ರಧಾನಿ ನರೇಂದ್ರ ಮೋದಿಯವರೆ ಜಾತಿಗಣತಿಗೆ ಮುಂದಾಗಿದ್ದು ರಾಜ್ಯ ಸರ್ಕಾರದ ಮೇಲಿನ ದೊಡ್ಡಭಾರ ತಪ್ಪಿದೆ. ಅನೇಕ ಜಾತಿಯವರು ತಮ್ಮ ಜನಸಂಖ್ಯೆ ಹೆಚ್ಚು ಎಂದು ವಾದಿಸುತ್ತಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಜಾತಿಗಣತಿ ಮಾಡಿದ್ದರಿಂದ ನಿಖರವಾದ ಮಾಹಿತಿ ಸಿಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಶಿವಪ್ಪನಾಯಕ ನಗರದ ಪರಿಶಿಷ್ಟ ವರ್ಗದ ಕಾಲೋನಿಯಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ಮನೆಮನೆ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಗಣತಿ ಜೊತೆ ಜಾತಿಗಣತಿಗೂ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಸಂತೋಷ ತಂದಿದೆ ಎಂದರು.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಲೋಪವಾಗಬಾರದು ಎನ್ನುವ ಉದ್ದೇಶಕ್ಕೆ ಪುನರ್ ಪರಿಶೀಲನೆಗೆ ಶಿಫಾರಸ್ಸು ಮಾಡಿತ್ತು. ಪರಿಶಿಷ್ಟ ಜಾತಿಯಲ್ಲಿ 101 ಪಂಗಡಗಳಿದ್ದು ಎಲ್ಲ ಪಂಡಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಅನೇಕ ಸಂದರ್ಭದಲ್ಲಿ ಅರ್ಹರಿಗೆ ಮೀಸಲಾತಿ ಸೌಲಭ್ಯಗಳು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮೀಸಲಾತಿಗೆ ಚಾಲನೆ ನೀಡಿದೆ. ಸಮೀಕ್ಷೆಗೆ ಬಂದಾಗ ನಿಖರವಾದ ಮಾಹಿತಿ ನೀಡುವ ಮೂಲಕ ನಿಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯ ಪಡೆದುಕೊಳ್ಳಲು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಸಣ್ಣಪುಟ್ಟ ಜಾತಿಗಳಿಗೆ ಸರ್ಕಾರಿ ಸೌಲಭ್ಯ ತಲುಪಬೇಕಾದರೆ ಗಣತಿ ಅಗತ್ಯ. ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿಯವರು ಜನಗಣತಿ ಜೊತೆ ಜಾತಿಗಣತಿಗೂ ಮುಂದಾಗಿರುವುದು ಎಲ್ಲ ವರ್ಗದ ಜನಸಂಖ್ಯೆ ಅರಿತುಕೊಳ್ಳುವ ಜೊತೆಗೆ ತುಳಿತಕ್ಕೊಳಗಾದ ಜನಾಂಗಗಳಿಗೆ ಮೀಸಲಾತಿ ಮೂಲಕ ಸರ್ಕಾರಿ ಸೌಲಭ್ಯ ತಲುಪಿಸಲು ಅನುಕೂಲವಾಗುತ್ತದೆ. ಜಾತಿಗಣತಿಗೆ ಅಧಿಕಾರಿಗಳು ಬಂದಾಗ ಪರಿಶಿಷ್ಟ ಜಾತಿಯವರು ತಮ್ಮ ಮೂಲಜಾತಿ ನಮೂದಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಳೆ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ., ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಸಹಾನೆ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು. ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.