ವಿಜಯಪುರ: ಶಾಸಕ ಬಸನಗೌಡ ಯತ್ನಾಳ್ ಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ. ಹಾಗಾಗಿ ಪದೇ ಪದೇ ಪಾಕ್ ಹೆಸರು ಉಲ್ಲೇಖ ಮಾಡುತ್ತಾರೆ ಎಂದು ಯತ್ನಾಳ್ ವಿರುದ್ಧ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ವಿಜಯಪುರಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿ, ನಾವು ಪಾಕಿಸ್ತಾನದ ಹೆಸರು ಕೂಡ ಹೇಳುವುದಿಲ್ಲ. ಆದರೆ ಪಾಕಿಸ್ತಾನದ ಮೇಲೆ ಯತ್ನಾಳ್ಗೆ ಯಾಕೆ ಪ್ರೀತಿ ಇದೆ ನನಗೆ ಗೊತ್ತಿಲ್ಲ. ಪಾಕಿಸ್ತಾನ ಹೆಸರು ಪದೇ ಪದೇ ಹೇಳು ಎಂದು ಪ್ರಧಾನಿ ಮೋದಿ ಯತ್ನಾಳ್ಗೆ ಹೇಳಿಕೊಟ್ಟಿರಬಹುದು ಎಂದು ಕಿಡಿಕಾರಿದರು.
ಇನ್ನು ವಿಜಯಪುರ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ರಂಗೇರಿದ್ದು, ಅಸಾದುದ್ದಿನ ಓವೈಸಿ ನಗರದಲ್ಲಿ ಬೃಹತ್ ಪಾದಯಾತ್ರೆ ಕೈಗೊಂಡಿದ್ದಾರೆ. ವಿಜಯಪುರ ನಗರದ ಜುಮ್ಮಾ ಮಸೀದಿಯಿಂದ ಸಿಕ್ಯಾಬ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಓವೈಸಿ ಬೆಂಬಲಿಗರು ಜಮಾಯಿಸಿದ್ದರು. ದೇಖೋ ದೇಖೋ ಕೋನ್ ಆಯಾ, ಶೇರ್ ಆಯಾ ಶೇರ್ ಆಯಾ ಎಂದು ಬೆಂಬಲಿಗರು ಘೋಷಣೆ ಕೂಗಿದರು.