ಬೆಂಗಳೂರು : ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚುವಂತೆ ತಾವು ಹೇಳಿದ್ದಾಗಿ ನಕಲಿ ಆಡಿಯೊವನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದರಿಂದ ನನ್ನ ಘನತೆಗೆ ಧಕ್ಕೆಯುಂಟಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಆಡಿಯೊ ಹರಿ ಬಿಡುವ ಮೂಲಕ ತಮ್ಮ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚುನಾವಣೆ ನಡೆದು ಆರು ತಿಂಗಳು ಆಗಿದೆ. ಯಾವ ಉದ್ದೇಶದಿಂದ ನಕಲಿ ಆಡಿಯೊ ಜಾಲತಾಣದಲ್ಲಿ ಹರಿಬಿಡಲಾಗಿದೆ? ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಮಾತನಾಡಿರುವುದೇ ಒಂದು. ಅದಕ್ಕೆ ಸಂಬಂಧವಿಲ್ಲದ ಮತ್ತೊಂದು ಆಡಿಯೊವನ್ನು ಸೇರಿಸಲಾಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದಿದ್ದಾರೆ.