ಬಳ್ಳಾರಿ : ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಸೇರಿ ಕುಟುಂಬ ಸದಸ್ಯರ ಮೇಲೆ ಶನಿವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಶೋಧ ಕಾರ್ಯ ಅಂತ್ಯವಾಗಿದ್ದು, ಮಹತ್ವದ ದಾಖಲೆಗಳೊಂದಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿನ ಮೋಕಾ ರಸ್ತೆಯಲ್ಲಿರುವ ಶಾಸಕ ಭರತ್ ರೆಡ್ಡಿ ಹಾಗೂ ತಂದೆ ಸೂರನಾರಾಯಣ ರೆಡ್ಡಿ ಅವರ ಕಚೇರಿಗಳಲ್ಲಿ ಪರಿಶೀಲನಾ ಕಾರ್ಯ ಭಾನುವಾರವೂ ಮುಂದುವರಿದಿತ್ತು. ಆಪ್ತರ ಮನೆಗಳ ಮೇಲೆ ಶನಿವಾರ ದಾಳಿ ನಡೆಸಿ, ಅನೇಕ ಮಹತ್ವದ ದಾಖಲೆ ವಶಪಡಿಸಿಕೊಂಡಿರುವ ಅಧಿಕಾರಿಗಳು, ಅವುಗಳ ತಪಾಸಣೆ, ಆಸ್ತಿ ಮತ್ತಿತರ ದಾಖಲೆಗಳ ಪರಿಶೀಲನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ತಡರಾತ್ರಿ ವರೆಗೆ ಆಸ್ತಿ ಹಾಗೂ ಉದ್ಯಮದ ವಹಿವಾಟು ಕುರಿತ ಪರಿಶೀಲನೆ ಕಾರ್ಯವೂ ಮುಂದುವರಿದಿತ್ತು. 20ಕ್ಕೂ ಹೆಚ್ಚು ಅಧಿಕಾರಿಗಳು ಬಳ್ಳಾರಿಯಲ್ಲಿ ಶಾಸಕ ರೆಡ್ಡಿ ಕಚೇರಿ, ನಿವಾಸ ಸೇರಿ 6 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಆಂಧ್ರ, ಚೆನ್ನೈನಲ್ಲೂ ಈ ದಾಳಿ ನಡೆದಿದ್ದು, ಒಟ್ಟು 13 ಕಡೆ ಭರತ್ ರೆಡ್ಡಿ ಹಾಗೂ ಸೂರ್ಯನಾರಾಯಣ ರೆಡ್ಡಿ ಅವರ ವ್ಯವಹಾರಕ್ಕೆ ಸಂಬಂಧಿಸಿದ ಆಸ್ತಿ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ಭಾರೀ ಪ್ರಮಾಣದ ಅಕ್ರಮ ಹಣ ವರ್ಗಾವಣೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.