ಮಂಡ್ಯ : ಪೌರ ಕಾರ್ಮಿಕರು ಸಹ ಇತರೆ ಜನರಂತೆ ಸಮಾನತೆ ಹಾಗೂ ಒಳ್ಳೆಯ ವಾತಾವರಣದಲ್ಲಿ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರ ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೂ ಸೂರು ಕಲ್ಪಿಸುವ ಯೋಜನೆ ರೂಪಿಸಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.
ಮದ್ದೂರು ಪಟ್ಟಣದ ಸಿದ್ದಾರ್ಥನಗರ ಬಡಾವಣೆಯ 7 ನೇ ಕ್ರಾಸ್ ನಲ್ಲಿ ನಗರಾಭಿವೃದ್ದಿ ಇಲಾಖೆ ವತಿಯಿಂದ ಗೃಹ ಭಾಗ್ಯ ಯೋಜನೆಯಡಿ ಪುರಸಭೆಯ ಖಾಯಂ ಪೌರ ಕಾರ್ಮಿಕರಿಗೆ ಅಂದಾಜು 1.95 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ 16 ಮನೆಗಳನ್ನು ಹಸ್ತಾಂತರ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಡೀ ಪಟ್ಟಣವನ್ನು ಸ್ವಚ್ಚಗೊಳಿಸಿ, ನೈರ್ಮಲ್ಯವನ್ನು ಕಾಪಾಡಿ ಸೌಂದರ್ಯಕರಣ ಮಾಡಲು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಶ್ರಮಿಸುವ ಪೌರ ಕಾರ್ಮಿಕರು ಇತರ ಜನರಂತೆ ಒಳ್ಳೆಯ ವಾತಾವರಣದಲ್ಲಿ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸರ್ಕಾರ ಗೃಹ ಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೂ ಸೂರು ಕಲ್ಪಿಸುವ ಯೋಜನೆ ರೂಪಿಸಿದೆ ಎಂದರು.
ಪ್ರಸ್ತುತ 16 ಮನೆಗಳನ್ನು ಪೂರ್ಣಗೊಳಿಸಿ ವಾಸಕ್ಕೆ ನೀಡಲಾಗಿದೆ. ಉಳಿದ 7 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಿ ಇನ್ನುಳಿದ ಪೌರ ಕಾರ್ಮಿಕರಿಗೆ ವಿತರಣೆ ಮಾಡಲಾಗುವುದು ಎಂದರು.
ರಾಮ್ ರಹೀಂ ನಗರ, ಚನ್ನೇಗೌಡ ಬಡಾವಣೆ ನಿವಾಸಿಗಳಿಗೆ ಹಲವು ವರ್ಷಗಳಿಂದ ವಾಸವಾಗಿದ್ದಾರೆ. ಇವರಿಗೆ ಹಕ್ಕು ಪತ್ರ ನೀಡಿಲ್ಲ ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಈ ಬಗ್ಗೆ ತಾವು ಶೀಘ್ರದಲ್ಲೇ ಅಧಿಕಾರಿಗಳ ಸಭೆ ನಡೆಸಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿರುವ ತಮಿಳು ಕಾಲೋನಿ ನಿವಾಸಿಗಳನ್ನು ಸ್ಥಳಾಂತರ ಮಾಡಿ ಅವರಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಗಳ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದೇನೆ ಈ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ರೂಪುರೇಷಗಳ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಶಾಸಕ ಉದಯ್ ತಿಳಿಸಿದರು.
ಇದೇ ವೇಳೆ ನಗರಾಭಿವೃದ್ದಿ ಇಲಾಖೆಯ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ಇಇ ಆರ್.ಪ್ರತಾಪ್, ಎಇಇ ರಾಘವೇಂದ್ರ, ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸಿದ್ದರಾಜು, ಪ್ರಮೀಳಾ, ಸಚ್ಚಿನ್, ಸುರೇಶ್ ಕುಮಾರ್, ಸುಮಿತ್ರಾ ರಮೇಶ್, ಸರ್ವಮಂಗಳ, ಕಮಲ್ ನಾಥ್, ಸಿದ್ದಮರಿ ಶಾಂತಮ್ಮ, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ