ಬೆಂಗಳೂರು: ಇಂದು ಅರಣ್ಯ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷರಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಶಂಕಿನಮಠ, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸೂಡಾ ಮಾಜಿ ಅಧ್ಯಕ್ಷ ರಮೇಶ್, ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಶ್ರೀದರ್, ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಕಾಂಗ್ರೆಸ್ ಹಿರಿಯ ಮುಖಂಡ ಶ್ರೀಕಾಂತ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಆಗಮಿಸಿ ಶುಭ ಕೋರಿದರು.
ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಅರಣ್ಯ ಕೈಗಾರಿಕಾ ನಿಗಮದವತಿಯಿಂದ ಇನ್ನು ಮುಂದೆ ನೂತನವಾಗಿ ಲಿಡ್ಕರ್ ಮಾದರಿಯಲ್ಲಿ ಆಸನ ಪೀಠಪೋಕರಣಗಳ ಮಳಿಗೆಗಳನ್ನು ಆರಂಭಿಸಲಾಗುವುದು ಇದರಿಂದ ನಿಗಮಕ್ಕೆ ಹಾಗೂ ಸರ್ಕಾರಕ್ಕೆ ಹೆಚ್ಚಿನ ಲಾಭ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.
ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಕಚೇರಿಗಳಿಗೆ ಅರಣ್ಯ ಕೈಗಾರಿಕಾ ನಿಗಮದಿಂದಲೇ ತಯಾರಿಸಿದ ಕುರ್ಚಿ, ಟೇಬಲ್, ಬೆಂಚುಗಳನ್ನು ಇನ್ನು ಮುಂದೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು,ಈ ಕುರಿತಂತೆ ಶಿಕ್ಷಣ ಇಲಾಖೆ,ವಿವಿಧ ಇಲಾಖೆಗಳ ಮುಖ್ಯಸ್ಥರಿಂದ ಅರಣ್ಯ ಕೈಗಾರಿಕಾ ನಿಗಮದಿಂದಲೇ ಖರೀದಿ ಮಾಡಲು ಸುತ್ತೋಲೆ ಹೊರಡಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.