ಬೆಂಗಳೂರು: ವಿಶ್ವ ಸಂಗೀತ ಲೋಕದ ಧ್ರುವತಾರೆ ಎನಿಸಿದ್ದ ಖ್ಯಾತ ಸರೋದ್ ವಾದಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ.ರಾಜೀವ್ ತಾರಾನಾಥ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪಂಡಿತ್ ರಾಜೀವ್ ತಾರಾನಾಥ್ ಕರ್ನಾಟಕದ ಹೆಮ್ಮೆಯ ದಿಗ್ಗಜ ಕಲಾವಿದರಲ್ಲಿ ಒಬ್ಬರು, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುವಂತಹದ್ದು. ಅಂತಹ ಅದ್ಭುತ ಕಲಾವಿದ ವಿಧಿವಶರಾಗಿದ್ದು ನಮ್ಮ ದುರ್ದೈವ, ಅವರ ನಿಧನದಿಂದ ಕರ್ನಾಟಕದ ಸಾಂಸ್ಕೃತಿಕ ಲೋಕ ಬಹಳ ದೊಡ್ಡ ನಷ್ಟ ಅನುಭವಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ದೇಶ ವಿದೇಶಗಳಲ್ಲಿ ಅವರು ತಮ್ಮ ಸಂಗೀತದ ಮೂಲಕ ಕರ್ನಾಟಕದ ಕೀರ್ತಿಯನ್ನ ಪಸರಿಸಿದ್ದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಸಹ ಕಾರ್ಯನಿರ್ವಹಿಸಿದ್ದರು, ಸಂಗೀತ ನಾಟಕ ಅಕಾಡೆಮಿ ಹಾಗೂ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಸೇರಿದಂತೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ರಾಜೀವ್ ತಾರಾನಾಥ್ ಈ ದೇಶ ಕಂಡ ಅತ್ಯಂತ ಅಪರೂಪದ ಕಲಾವಿದರಾಗಿದ್ದರು ಎಂದಿದ್ದಾರೆ.
ರಾಜೀವ್ ತಾರಾನಾಥ್ ಅವರ ಕುಟುಂಬ ಹಾಗೂ ಅವರ ಸಂಖ್ಯಾತ ಅಭಿಮಾನಿಗಳು ಹಾಗೂ ಶಿಷ್ಯ ವೃಂದದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ, ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪವನ್ನು ತಿಳಿಸಿದ್ದಾರೆ.
BREAKING: ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ‘ಮೋಹನ್ ಚರಣ್ ಮಾಂಝಿ’ ಆಯ್ಕೆ | Mohan Charan Majhi
10 ದಿನಗಳ ‘ಯೋಗೋತ್ಸವ’ ಕಾರ್ಯಕ್ರಮಕ್ಕೆ ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್’ ಚಾಲನೆ