ಬೆಂಗಳೂರು : ವಿದೇಶದಲ್ಲಿ ವೃತ್ತಿ ಜೀವನ ಆರಂಭಿಸಬೇಕೆಂಬ ಕನಸು ಹೊಂದಿರುವ ಆಕಾಂಕ್ಷಿಗಳಿಗೆ ಅವಕಾಶ ಒದಗಿಬಂದಿದೆ. ಜರ್ಮನಿಯಲ್ಲಿ ನರ್ಸಿಂಗ್ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ ವೃತ್ತಿ ಜೀವನ ಕಂಡುಕೊಳ್ಳಬೇಕೆನ್ನುವವರಿಗೆ ಕರ್ನಾಟಕ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ.
ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ (ಕೆವಿಟಿಎಸ್‌ಡಿಸಿ) ನಿಗಮ ಈಗ ಜರ್ಮನ್ ಭಾಷಾ ಕಲಿಕಾ ಕೇಂದ್ರವನ್ನು ಆರಂಭಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಡೊಯಿಚೆ ಫಾಕ್‌ಕ್ರಾಪ್ಟ್ ಏಜೆಂಟುರ್ ಫರ್ ಎಸುಂಡ್‌ಟಾಯ್ಟ್ ಮತ್ತು ಫ್ಲೆಗೆಬುರುಫ್ ಜಿಎಂಬಿಹೆಚ್ (ಡಿಇಎಫ್‌ಎ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಜರ್ಮನಿ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದ ಟೆಲ್ಕ್‌ನ ಗ್ಲೋಬಲ್ ಬ್ಯುಸಿನೆಸ್ ನಿರ್ದೇಶಕ ಬ್ರೂನೋ ಕಾರ್ಲೆಸ್ಸೊ ಒಪ್ಪಂದಕ್ಕೆ ಸಹಿ ಹಾಕಿದರು.
ಆರೋಗ್ಯ ಕ್ಷೇತ್ರದಲ್ಲಿ ಭಾರತ-ಜರ್ಮನಿ ಸಹಕಾರವನ್ನು ಬಲಪಡಿಸಲು ಪೀಣ್ಯದಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ (ಕೆಜಿಟಿಟಿಐ) ಹೊಸ ಜರ್ಮನಿ ಭಾಷಾ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಈಗಾಗಲೇ ಆಕಾಂಕ್ಷಿತ ಅಭ್ಯರ್ಥಿಗಳ ಆಯ್ಕೆ ಮಾಡಲು ಆರಂಭಿಸಿದೆ. ಮುಖ್ಯವಾಗಿ ನರ್ಸ್‌ಗಳಿಗೆ ವೃತ್ತಿಪರತೆ, ವಲಸೆ ಹಾಗೂ ಇತರೆ ವಿಷಯಗಳಿಗೆ ಅನುಕೂಲವಾಗಲೆಂದು ಜರ್ಮನ್ ಭಾಷಾ ಕಲಿಕೆ ತರಬೇತಿ ಆರಂಭಿಸಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್ ಪಾಟೀಲ್ ಕರ್ನಾಟಕದಾದ್ಯಂತ ಆರೋಗ್ಯ ಮತ್ತು ನರ್ಸಿಂಗ್ ವೃತ್ತಿಪರರು ಜರ್ಮನಿಯಲ್ಲಿ ಉದ್ಯೋಗ ಅರಸಿ ಹೋದರೆ ಅವರಿಗೆ ಭಾಷಾ ಸಮಸ್ಯೆ ಬರಬಾರದು ಎಂದು ತರಬೇತಿ ನೀಡಲಾಗುತ್ತಿದೆ. ಅಲ್ಲಿ ನೋಂದಣಿಯಾಗಿರುವ ನರ್ಸ್‌ಗಳಿಗೆ ಜರ್ಮನ್ ಪ್ರಾವೀಣ್ಯತೆ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಇದು ನೆರವಾಗಲಿದೆ ಎಂದರು.
ಜರ್ಮನ್ ಫೆಡರಲ್ ಆರೋಗ್ಯ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ ಡಿಇಎಫ್ಎ, ಅಂತಾರಾಷ್ಟ್ರೀಯ ಆರೋಗ್ಯ ಕಾರ್ಯಕರ್ತರ ನೇಮಕಾತಿ, ನೈತಿಕತೆ, ಪಾರದರ್ಶಕತೆ ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಯುರೋಪಿಯನ್ ಭಾಷಾ ಪ್ರಮಾಣಪತ್ರ (ಟೆಲ್ಕ್) ಪರೀಕ್ಷೆಗಳು, ಯುರೋಪಿಯನ್ ಫ್ರೇಮ್‌ವರ್ಕ್ ಆಫ್ ರೆಫರೆನ್ಸ್ ಫಾರ್ ಲ್ಯಾಂಗ್ವೇಜಸ್ (ಸಿಇಎಫ್‌ಆರ್) ಜೊತೆ ಹೊಂದಿಕೆಯಾಗಿದ್ದು ಇದರಿಂದ ಜರ್ಮನಿಯಲ್ಲಿ ಅಧ್ಯಯನ, ಕೆಲಸ ಮತ್ತು ವಾಸಕ್ಕೆ ಸೌಲಭ್ಯ ಒದಗಿಸುತ್ತದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಟೆಲ್ಕ್‌ನ ಗ್ಲೋಬಲ್ ಬ್ಯುಸಿನೆಸ್ ನಿರ್ದೇಶಕ ಬ್ರೂನೋ ಕಾರ್ಲೆಸ್ಸೊ, ಈಗ ಸ್ಥಾಪನೆಯಾಗಿರುವ ತರಬೇತಿ ಕೇಂದ್ರವು ಮಹತ್ವಾಕಾಂಕ್ಷಿ ಆರೋಗ್ಯ ವೃತ್ತಿಪರರಿಗೆ ಉತ್ತಮ-ಗುಣಮಟ್ಟದ ಭಾಷಾ ಪ್ರಮಾಣೀಕರಣ ಮಾರ್ಗ ಒದಗಿಸಲು ಪ್ರಮುಖ ಪಾತ್ರವಹಿಸಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜರ್ಮನ್ ಡೆಪ್ಯೂಟಿ ಕಾನ್ಸುಲ್ ಜನರಲ್ ಅನೆಟ್ಟ ಬೇಸ್ಲರ್, ಭಾರತ ಮತ್ತು ಸೌಥ್ ಈಸ್ಟ್ ಏಷ್ಯಾ ನಿರ್ದೇಶಕ ಅನೂಪ್ ಅಚ್ಯುತನ್, ಕೆವಿಟಿಎಸ್‌ಡಿಸಿ ಅಧ್ಯಕ್ಷರಾದ ಶಿವಕಾಂತಮ್ಮ ನಾಯಕ್, ಆರ್. ರಾಗಪ್ರಿಯಾ ಮತ್ತು ಎನ್.ಎಂ. ನಾಗರಾಜ ಹಾಜರಿದ್ದರು.
ಎಐ ಗ್ರಿಡ್ ರಚನೆ ಪ್ರಸ್ತಾಪಿಸಿದ ಡಾ. ಪಾಟೀಲ್
ಗುರುವಾರ ನಡೆದ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಭಾಗವಹಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಕೃತಕ ಬುದ್ಧಿಮತ್ತೆಯಲ್ಲಿ ಕಾರ್ಯಪಡೆಯ ವಿಭಾಗಗಳನ್ನು ಮ್ಯಾಪಿಂಗ್ ಮತ್ತು ತರಬೇತಿ ನೀಡುವ “AI ಗ್ರಿಡ್” ರಚನೆ ಪ್ರಸ್ತಾಪಿಸಿದರು.
ತಮ್ಮ ಭಾಷಣದಲ್ಲಿ ಎಐ ಕುರಿತು ಪ್ರಸ್ತಾಪಿಸಿದ ಸಚಿವರು, ಇತ್ತೀಚೆಗೆ ಎಲ್ಲೆಡೆ ಕೃತಕ ಬುದ್ಧಿಮತ್ತೆ (AI) ಹೆಚ್ಚಾಗಿದೆ. ಆದರೆ ಯುವಕರು ಇದರಿಂದ ಆತಂಕಗೊಳ್ಳಬಾರದು. ಔದ್ಯೋಗಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಹೊಸ ಯುಗದ ಕೌಶಲ್ಯಗಳನ್ನು ಕಲಿಯಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ನಾವು ಎಲ್ಲದರಲ್ಲೂ ಅಪ್‌ಡೇಟ್ ಆಗಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಸೇವೆಯಲ್ಲಿ ಎಐ ಅನ್ನು ಹಂತ ಹಂತವಾಗಿ ಪರಿಚಯಿಸುವುದರ ಬಗ್ಗೆ ಅನ್ವೇಷಿಸಲಾಗುತ್ತದೆ ಎಂದು ಸಚಿವ ಡಾ. ಪಾಟೀಲ್ ತಿಳಿಸಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ (ಕೆಎಸ್‌ಡಿಎ) ಅಧ್ಯಕ್ಷ ಡಾ. ಇ.ವಿ. ರಮಣ ರೆಡ್ಡಿ ಮಾತನಾಡಿ, AI ಅಕಾಡೆಮಿಯಾ-ಇಂಡಸ್ಟ್ರಿ ಸಹಯೋಗ ಮಾದರಿ ಆರಂಭಿಸಿ, ಎಐ ಕ್ಷೇತ್ರದಲ್ಲಿ ಹೆಚ್ಚು ನಾವೀನ್ಯತೆ ಹಾಗೂ ಕ್ರಿಯಾಶೀಲತೆ ಮತ್ತು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಹಾಯವಾಗಲಿದೆ ಎಂದು ತಿಳಿಸಿದರು.
BREAKING ;’IBPS ಕ್ಲರ್ಕ್ ಪ್ರಿಲಿಮ್ಸ್’ ಫಲಿತಾಂಶ ಬಿಡುಗಡೆ ; ಈ ರೀತಿ ಸ್ಕೋರ್ಕಾರ್ಡ್ ಡೌನ್ಲೋಡ್ ಮಾಡಿ!








