ಬೆಳಗಾವಿ ಸುರ್ಣಸೌಧ : ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶಾಲಾ ಕಿಟ್ ನೀಡುವ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಭರವಸೆ ನೀಡಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಾಲ್ಕನೇ ದಿನದ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.
ಈವರೆಗೆ ೧೩ ಲಕ್ಷಕ್ಕೂ ಹೆಚ್ಚು ಮಕ್ಕಳಿಗೂ ಸ್ಕಾಲರ್ ಶಿಪ್ ನೀಡಿದ್ದೇವೆ. ಹಾಗಾಗಿ ಶಾಲಾ ಕಿಟ್ ಕೊಡುವ ಅಗತ್ಯ ಇಲ್ಲ ಎಂದು ಮಂಡಳಿಯಲ್ಲಿ ತೀರ್ಮಾನ ಆಗಿದೆ. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಶಾಲಾ ಕಿಟ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.
ಟೂಲ್ ಕಿಟ್: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಟೂಲ್ ಕಿಟ್‌ಗಳನ್ನು ನೀಡಲಾಗುತ್ತಿಲ್ಲ ಎಂಬ ಶಾಸಕ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್ ಅವರು, ಈವರೆಗೆ ಏಳು ಲಕ್ಷ ಜನರಿಗೆ ಟೂಲ್ ಕಿಟ್ ಕೊಟ್ಟಿದ್ದೇವೆ. ಒಮ್ಮೆ ಕೊಟ್ಟರೆ ಮತ್ತೆ ಕೊಡಲು ಬರುವುದಿಲ್ಲ. ಇದಕ್ಕೆ ಸಮಯ ನಿಗದಿ ಮಾಡಬೇಕು. ಇದನ್ನು ಮಂಡಳಿ ಪರಿಶೀಲನೆ ಮಾಡುತ್ತಾ ಇದೆ. ಬಹಳಷ್ಟು ಕಾರ್ಮಿಕರು ಸಹಾಯಕರಾಗಿ ನೋಂದಣಿ ಮಾಡಿದ್ದಾರೆ. ಅವರು ಟೆಕ್ನಿಷಿಯನ್ ಆದ ನಂತರ ಕಿಟ್ ಕೊಡಬಹುದು ಎಂದರು.
ಪೌಷ್ಟಿಕಾಂಶದ ಕಿಟ್: ಮಂಡಳಿಯ ವತಿಯಿಂದ ಪೌಷ್ಟಿಕಾಂಶದ ಕಿಟ್ ವಿತರಣೆ ಮಾಡುತ್ತಾ ಇಲ್ಲ ಎಂಬ ಶಾಸಕ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಡಳಿ ವತಿಯಿಂದ ಪ್ರಿವೆಂಟಿವ್ ಹೆಲ್ತ್ ಎಂಬ ಯೋಜನೆ ಜಾರಿಯಲ್ಲಿದೆ. ಇಲ್ಲಿ ಅನಿಮಿಕ್ ಇರುವವರು ಪತ್ತೆಯಾಗುತ್ತಿದ್ದಾರೆ. ಶೇ.13ರಷ್ಟು ಕಾರ್ಮಿಕರು ರಕ್ತಹೀನತೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಅವರಿಗೆ ನ್ಯೂಟ್ರಿಷನ್ ಕಿಟ್ ಕೊಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದ ಎರಡು ಮೂರು ಜಿಲ್ಲೆಗೆ ESI ಆಸ್ಪತ್ರೆ ಸ್ಥಾಪನೆಗೆ ಕೇಂದ್ರಕ್ಕೆ ಮನವಿ: ಸಚಿವ ಸಂತೋಷ್ ಲಾಡ್








