ಬೆಂಗಳೂರು : ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ವಿಶೇಷ ಅನುದಾನದಿಂದ, ಈಜಿಪುರ ಒಳ ರಿಂಗ್ ರಸ್ತೆ (ಶ್ರೀನಿವಾಗಿಲು) ಯಿಂದ ಸರ್ಜಾಪುರ ಮುಖ್ಯ ರಸ್ತೆ (ಓಆರ್‌ಆರ್) ವರೆಗೆ ರೂ.47 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಯೋಜನೆಗೆ ಸಾರಿಗೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪೂಜೆ ನೆರವೇರಿಸಿದರು.
ಈಜಿಪುರ ಒಳ ರಿಂಗ್ ರಸ್ತೆ (ಶ್ರೀನಿವಾಗಿಲು) ಯಿಂದ ಸರ್ಜಾಪುರ ಮುಖ್ಯ ರಸ್ತೆ (ಓಆರ್‌ಆರ್) ವರೆಗೆ ರಕ್ಷಣಾ ಭೂಮಿ ಮೂಲಕ ಸಾಗುವ 80 ಅಡಿ ಅಗಲದ (24.0 ಮೀಟರ್) ಸಂಪರ್ಕ ರಸ್ತೆ ನಿರ್ಮಾಣ ಹಾಗೂ ರಕ್ಷಣಾ ಭೂಮಿ ತೋಟಗಾರಿಕೆ ಕೆಲಸ (ಪ್ರಥಮ ಹಂತ – 5.34 ಏಕರೆ) ಒಟ್ಟು 3 ಕಿ.ಮೀ ಉದ್ದದಲ್ಲಿ ಪ್ರಾರಂಭಿಸಲಾಯಿತು.
2015ರ ಮಾಸ್ಟರ್ ಪ್ಲಾನ್‌ನಲ್ಲಿ, ಈಜಿಪುರ ಸಿಗ್ನಲ್ (ಶ್ರೀನಿವಾಗಿಲು) ಯಿಂದ ಸರಜಾಪುರ ಮೈನ್ ರಸ್ತೆ (ಓಆರ್‌ಆರ್) ವರೆಗೆ ಸಂಪರ್ಕ ರಸ್ತೆಯನ್ನು ಕಲ್ಪಿಸಲಾಗಿತ್ತು. ಇದು ಪೂರ್ವ ಬೆಂಗಳೂರು ಮತ್ತು ಓಆರ್‌ಆರ್, ಹೆಚ್‌ಎಸ್‌ಆರ್ ನಡುವೆ ಸಂಪರ್ಕ ಕಲ್ಪಿಸಲು ಉದ್ದೇಶಿತವಾಗಿತ್ತು.
ಆದರೆ ರಕ್ಷಣಾ ಇಲಾಖೆಯಿಂದ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣವಾಗದ ಕಾರಣ ಈ ಯೋಜನೆಯನ್ನು ಕೈಗೊಳ್ಳಲು ಸಕಾಲದಲ್ಲಿ ಸಾಧ್ಯವಾಗಲಿಲ್ಲ. ಸುಮಾರು 15ವರುಷಗಳ ಕಾಲ ಇಲ್ಲಿನ ಜನರು ಕನಸು ಕಂಡಿದ್ದ ಬಹುನಿರೀಕ್ಷಿತ ಕೆಲಸಕ್ಕೆ ಕೈಗೂಡುವ ಸಮಯ ಈಗ ಒದಗಿಬಂದಿದೆ. ನಮ್ಮ ರಾಜ್ಯ ಸರ್ಕಾರ ಈ ರಸ್ತೆ ಅಭಿವೃದ್ಧಿಗೆ ಸದಾ ಸಿದ್ಧವಾಗಿತ್ತು. ಇಂದು ನಾವು ಈ ಯೋಜನೆಯನ್ನು ಆರಂಭಿಸಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಮಾನ್ಯ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಬಿಜು ಶಾಂತಾರಾಮ್, ಬ್ರಿಗ್ ಸಿಎಂಎಲ್, ಎಚ್‌ಕ್ಯೂ ಕೆಕೆ ಸಬ್ ಏರಿಯಾ ಕರ್ನಲ್ ಕೆಪಿ ರಾಜೇಂದ್ರ, ಕರ್ನಲ್ ಲ್ಯಾಂಡ್, ಕರ್ನಲ್ ಶ್ರೀ ಕುಮಾರ್, ಎಸ್ಒ ಲ್ಯಾಂಡ್, ಎಎಸ್‌ಸಿ ಸೆಂಟರ್, ಗೀತಾ (ಇಇ, ಬಿ-ಸ್ಮೈಲ್), ಕೊರಮಂಗಲ 1ನೇ, 3ನೇ, 4ನೇ, 6ನೇ ಬ್ಲಾಕ್‌ಗಳ ಆರ್‌ಡಬ್ಲ್ಯುಎ ಪ್ರತಿನಿಧಿಗಳು, ಎಸ್ಟಿ ಬೆಡ್, ಶಾಂತಿನಗರ ಸೊಸೈಟಿ ಲೇಔಟ್ ಅಧ್ಯಕ್ಷರು, ನಿರ್ಗುಣ ಮಂದಿರದ ಅಪಾರ್ಟ್‌ಮೆಂಟ್ ಪ್ರತಿನಿಧಿಗಳು, ಶ್ರೀನಿವಾಗಿಲು ಹಾಗೂ ಈಜಿಪುರ ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.