ದಾವಣಗೆರೆ : ಅಯೋಧ್ಯೆಗೆ ಭೇಟಿ ನೀಡಿದಾಗ ಅಲ್ಲಿ ಟೆಂಟ್‌ನಲ್ಲಿ ಮೂರು ಬೊಂಬೆ ಇಟ್ಟಿದ್ದರೆಂದು ಶ್ರೀರಾಮನ ಬಗ್ಗೆ ತೀರಾ ಹಗುರ ಹೇಳಿಕೆ ನೀಡಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣಗೆ ಶ್ರೀರಾಮನ ಶಾಪ ತಟ್ಟೇ ತಟ್ಟುತ್ತದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಹಿಂದು ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಆಗಮಿಸಿದ್ದ ಅವರು, ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ರಾಜಣ್ಣ ಬಾಯಿಯಿಂದ ಇಂತಹ ಪದಗಳು ಬರಬಾರದು. ನೀವು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಯಾರನ್ನೋ ಓಲೈಕೆ ಮಾಡಲು ಹೀಗೆಲ್ಲಾ ಮಾತನಾಡಬಾರದು.
ಕೇಂದ್ರ ಪುರಾತತ್ವ ಇಲಾಖೆಯ ಉಪ ನಿರ್ದೇಶಕರಿದ್ದ ಮಹಮ್ಮದ್ ಅಲ್ಲಿ ರಾಮಲಲ್ಲಾ ಇದ್ದ ಬಗ್ಗೆ ಪ್ರಮಾಣಪತ್ರ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ಗೆ ರಾಮ ಮಂದಿರ ಇದ್ದ ಬಗ್ಗೆ ಸಾಕ್ಷ್ಯ ನೀಡಲಾಗಿತ್ತು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ರಾಮ ಮಂದಿರ ಪರ ತೀರ್ಪು ಬಂದಿದ್ದರೂ, ಅಲ್ಲಿ ಮೂರು ಬೊಂಬೆ ಇಟ್ಟಿದ್ದರು ಅಂತಾ ಹೇಳುತ್ತೀರಾ? ಶ್ರೀರಾಮನ ಶಾಪ ನಿಮಗೆ ತಟ್ಟೇ ತಟ್ಟುತ್ತದೆ. ಹೀಗೆಲ್ಲಾ ಮಾತನಾಡುವವರು ಯಾರೇ ಆಗಲಿ ಅಂತಹವರನ್ನು ಸಂಪುಟದಿಂದ ವಜಾ ಮಾಡುವ ಕೆಲಸ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು ಎಂದು ಒತ್ತಾಯಿಸಿದರು.