ಕೊಡಗು: ಕಂದಾಯ, ಸರ್ವೇ ದಾಖಲೆಗಳನ್ನು ಪ್ರಾಯೋಗಿಕವಾಗಿ ಡಿಜಿಟಲೀಕರಣ ಮಾಡೋ ಭೂ ಸುರಕ್ಷಾ ಯೋಜನೆಗೆ ಸಚಿವ ಕೃಷ್ಣಬೈರೇಗೌಡ ಅವರು ಚಾಲನೆ ನೀಡಿದ್ದಾರೆ. ಹೀಗಾಗಿ ಇನ್ಮುಂದೆ ಎಲ್ಲಾ ದಾಖಲೆಗಳು ಡಿಜಿಟಲೀಕರಣಗೊಳ್ಳಲಿದ್ದಾವೆ.
ರಾಜ್ಯ ಸರ್ಕಾರದ ಹಾಗೂ ಕಂದಾಯ ಇಲಾಖೆಯ ಬಹು ನಿರೀಕ್ಷಿತ ಭೂ ಸುರಕ್ಷಾ ಯೋಜನೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಕೊಡಗಿನಲ್ಲಿ ಸೋಮವಾರ ಚಾಲನೆ ನೀಡಿದರು.
ಈ ಯೋಜನೆಯ ಅಡಿ 31 ಜಿಲ್ಲೆಯ 31 ತಾಲೂಕುಗಳ ರೆಕಾರ್ಡ್ ರೂಂ (ಭೂ ದಾಖಲೆ ಕೊಠಯ) ದಾಖಲೆಗಳನ್ನು ಪ್ರಾಯೋಗಿಕವಾಗಿ ಡಿಜಿಟಲೀಕರಣಗೊಳಿಸಲಾಗುವುದು. ಕಂದಾಯ ಮತ್ತು ಸರ್ವೇ ಇಲಾಖೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಮುಂದಿನ ಮೂರು ತಿಂಗಳಲ್ಲಿ ಡಿಜಿಟಲೀಕರಣಗೊಳ್ಳಲಿದೆ.
ಜನರಿಗೂ ಡಿಜಿಟಲ್ ದಾಖಲೆಗಳನ್ನೇ ನೀಡಲಾಗುವುದು. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ರಾಜ್ಯಾದ್ಯಂತ ಏಕ ಕಾಲಕ್ಕೆ ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.
ಮೇವು ಪೂರೈಕೆಗೆ ಸೂಚನೆ
ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಕೊಡಗು ಜಿಲ್ಲೆಗೂ ಈಗಾಗಲೇ ಅಗತ್ಯ ಮೇವಿನ ಕಿಟ್ ಗಳನ್ನು ರವಾನಿಸಲಾಗಿದೆ. ಈ ಕಿಟ್‌ಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು. ಈ ಕೆಲಸಕ್ಕೆ ಹಾಲು ಉತ್ಪಾಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು
ರೈತರಿಗೆ ಉಚಿತ ಮೇವಿನ ಕಿಟ್ ವಿತರಿಸಲು ಹೆಚ್ಚುವರಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ, ರಾಜ್ಯದ ಮೇವನ್ನು ಬೇರೆಡೆ ಸಾಗಿಸದಂತೆ ನವೆಂಬರ್ 22ರಂದೇ ನಿರ್ಬಂಧ ಆದೇಶ ಹೊರಡಿಸಲಾಗಿದೆ. ನೀರು ಸರಬರಾಜು, ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲೂ ಅಗತ್ಯ ಹಣ ಇದೆ ಎಂದು ಅವರು ಮಾಹಿತಿ ನೀಡಿದರು.