ಬೆಂಗಳೂರು : ಅರ್ಹತೆ ಇರುವ ರೈತ ಫಲಾಬುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್. ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023-24ನೇ ಸಾಲಿನ ಆಯವ್ಯಯ ಮಂಡನೆ ಸಂದರ್ಭದಲ್ಲಿ ಶೂನ್ಯ ಬಡ್ಡಿ ದರದಲ್ಲಿ ವಿತರಿಸುವ ಬೆಳೆ ಸಾಲದ ಮಿತಿಯನ್ನು ರೂ. 3.00 ಲಕ್ಷದಿಂದ ರೂ. 5.00 ಲಕ್ಷ ಏರಿಸಲಾಗಿದ್ದು, ಈ ಮಿತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 2023-24ನೇ ಸಾಲಿನಲ್ಲಿ 6,744 ರೈತರಿಗೆ ರೂ. 290.51 ಕೋಟಿ ಮತ್ತು 2024-25ನೇ ಸಾಲಿನಲ್ಲಿ 2025ನೇ ಫೆಬ್ರವರಿ 28 ರ ವರೆಗೆ 13,689 ರೈತರಿಗೆ ರೂ 589.12 ಕೋಟಿ ಮೊತ್ತದ ಸಾಲ ವಿತರಿಸಲಾಗಿರುತ್ತದೆ.
ರಾಜ್ಯದ 19 ಕೃಷಿ ವಲಯಗಳಿಗೆ ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯಲ್ಲಿ ಪ್ರತಿ ಬೆಳೆಗೆ ನಿಗದಿಪಡಿಸಿದ ಸ್ಕೇಲ್ ಆಫ್ ಫೈನಾನ್ಸ್ ಮಿತಿ, ರೈತರು ಹೊಂದಿರುವ ಭೂ ಹಿಡುವಳಿ ಹಾಗೂ ಬೆಳೆಯುವ ಬೆಳೆ ಆಧರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಗರಿಷ್ಠ ಸಾಲದ ಮಿತಿಯನ್ನು ನಿಗದಿಪಡಿಸಿದ್ದು ಇದರನ್ವಯ 1,73,449 ರೈತರು ರೂ. 3.00 ಲಕ್ಷದಿಂದ ರೂ. 5.00 ಲಕ್ಷಗಳವರೆಗಿನ ಬೆಳೆಸಾಲ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ತಿಳಿಸಿದರು.
ನಬಾರ್ಡ್ ನಿಯಮದಂತೆ ಜಿಲ್ಲಾ ಕೆಂದ್ರ ಸಹಕಾರ ಕೇಂದ್ರ ಬ್ಯಾಂಕುಗಳು ಕಳೆದ ಮೂರು ವರ್ಷಗಳಲ್ಲಿ ವಿತರಣೆ ಮಾಡಿದ ಸರಾಸರಿ ಸಾಲದ ಆಧಾರವಾಗಿ ತಯಾರಿಸಬೇಕಾದ ಆರ್.ಎಲ್.ಪಿ ಗೆ ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ಶೇ. 40 ರಷ್ಟು ಮತ್ತು ಹೆಚ್ಚಿನ ಬಡ್ಡಿ ದರದಲ್ಲಿ ಶೇ. 69 ರಷ್ಟು ಮಾತ್ರ ಪುನರ್ಧನವನ್ನು ನೀಡಲು ನೀತಿ ಇದ್ದು ಉಳಿದ ಬಂಡವಾಳವನ್ನು ಡಿ.ಸಿ.ಸಿ ಬ್ಯಾಂಕುಗಳು ತನ್ನ ಸಂಪನ್ಮೂಲದಿಂದಲೇ ಭರಿಸಬೇಕಿದ್ದು ಬಂಡವಾಳದ ಕೊರತೆಯಾಗಿರುತ್ತದೆ.
ನಬಾರ್ಡ್ ಸಂಸ್ಥೆ ಶೇ. 40 ರಷ್ಟು ಪ್ರಮಾಣದಲ್ಲಿ ನೀಡಬೇಕಾದ ರಿಯಾಯಿತಿ ಬಡ್ಡಿ ದರದ ಮಿತಿಯನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬಂದಿರುತ್ತದೆ. ನಬಾರ್ಡ್ ಸಂಸ್ಥೆ 2024-25 ನೇ ಸಾಲಿನಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ಕಳೆದ ವರ್ಷದಲ್ಲಿ ಇದ್ದ ರೂ. 5600 ಕೋಟಿಗಳಿಂದ ಪ್ರಾರಂಭದಲ್ಲಿ ರೂ. 2340.00 ಕೋಟಿಗಳಿಗೆ ನಿಗದಿಮಾಡಿ ನಂತರ ರೂ. 896.11 ಕೋಟಿಗಳ ಹೆಚ್ಚುವರಿ ಮಿತಿಯನ್ನು ನೀಡಿದ್ದು ರೂ. 2363.89 ಕೋಟಿ ಕಡಿಮೆಯಾಗಿರುತ್ತದೆ
ಪ್ರತಿ ವರ್ಷ ಹೊಸ ಸದಸ್ಯರು ಸಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದು, ಡಿ.ಸಿ.ಸಿ. ಬ್ಯಾಂಕುಗಳು ಈ ಹೊಸ ರೈತರಿಗೆ ಪ್ರಥಮ ಅದ್ಯತೆ ನೀಡಿ ರೂ. 3.00 ಲಕ್ಷದವರೆಗೆ ಸಾಲ ವಿತರಿಸುತ್ತಿದ್ದು, ರೂ 3.00 ಲಕ್ಷಕ್ಕಿಂತ ಹೆಚ್ಚಿನ ಮಿತಿಗೆ ನಂತರದ ಆದ್ಯತೆ ನೀಡಲಾಗುತ್ತಿದೆ.
ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್ ಗೆ ಸೂಚಿಸಲು ವಿತ್ತಿಯ ಸಚಿವರು ಕೇಂದ್ರ ಸರ್ಕಾರದ ಮತ್ತು ಮಾನ್ಯ ಪ್ರಧಾನಮಂತ್ರಿಗಳಿಗೆ ಮಾನ್ಯ ಮುಖ್ಯ ಮಂತ್ರಿಗಳು ಪತ್ರ ಬರೆದಿರುತ್ತಾರೆ. ಕೇಂದ್ರ ವಿತ್ತ ಸಚಿವರು, ಕೇಂದ್ರ ಸರ್ಕಾರದವರು ನಬಾರ್ಡ್ ನಲ್ಲಿ ಮಾರುಕಟ್ಟೆ ದರ ಆಧಾರಿತ ಹೆಚ್ಚಿನ ಬಡ್ಡಿ ದರದ ಪುನರ್ಧನವು ಲಭ್ಯವಿರುವುದಾಗಿ ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ನಬಾರ್ಡ್ ರೂ. 896.11ಕೋಟಿಗಳ ಹೆಚ್ಚುವರಿ ಮಿತಿಯನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡಿರುತ್ತದೆ.
ಡಿ.ಸಿ.ಸಿ. ಬ್ಯಾಂಕುಗಳ ಬಂಡವಾಳವನ್ನು ಹೆಚ್ಚಿಸಲು ಜಿಲ್ಲೆಯ ಸಹಕಾರ ಸಂಘಗಳು ಹೊಂದಿರುವ ಮೀಸಲು ನಿಧಿಯನ್ನು ಕಡ್ಡಾಯವಾಗಿ ಡಿ.ಸಿ.ಸಿ. ಬ್ಯಾಂಕುಗಳಲ್ಲಿಯೇ ವಿನಿಯೋಗಿಸಲು ಸುತ್ತೋಲೆ ನೀಡಲಾಗಿದೆ. ಅಲ್ಲದೇ ಮುಜರಾಯಿ ಇಲಾಖೆ ಮತ್ತು ತಾಲ್ಲೂಕು ಕೃಷಿ ಮಾರುಕಟ್ಟೆ ಸಮಿತಿಗಳು ಹೊಂದಿರುವ ಹೆಚ್ಚುವರಿ ನಿಧಿಯನ್ನು ಡಿ.ಸಿ.ಸಿ ಬ್ಯಾಂಕುಗಳಲ್ಲಿ ವಿನಿಯೋಗಿಸುವಂತೆ ಮನವೊಲಿಸಲಾಗುತ್ತಿದೆ.
ಸರ್ಕಾರದಿಂದ ರೈತರ ಪರವಾಗಿ ಸಹಕಾರ ಸಂಘಗಳಿಗೆ ಮಾಡಬೇಕಾದ ಬಡ್ಡಿ ಸಹಾಯಧನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದ್ದು ಮಾರ್ಚ್ 2024 ರ ಅಂತ್ಯದ ಎಲ್ಲಾ ಬಿಲ್ಲುಗಳನ್ನು ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
ಮಂಡ್ಯ, KHB ಬಡಾವಣೆಗೆ ಹೊಸದಾಗಿ ನಳ ಸಂಪರ್ಕದ ಮೂಲಕ ನೀರು ಸರಬರಾಜು: ಸಚಿವ ಬಿ.ಎಸ್.ಸುರೇಶ್
Good News: ರಾಜ್ಯ ಸರ್ಕಾರದಿಂದ ‘KIDB ಪ್ರದೇಶ’ಕ್ಕೆ ಜಮೀನು ನೀಡಿದ ಭೂ ಮಾಲೀಕರಿಗೆ ಸಿಹಿಸುದ್ದಿ: ಸರ್ಕಾರಿ ಉದ್ಯೋಗ