ಬೆಂಗಳೂರು : ಬೇಸಿಗೆ ರಜಾವಧಿಯ ಬಿಸಿಯೂಟ ಫಲಾನುಭವಿಗಳ ಹಾಜರಾತಿಯನ್ನು ಸ್ವಯಂಚಾಲಿತ ಪದ್ಧತಿಯ (Automated Monitoring System) ಮೂಲಕ ಕಡ್ಡಾಯವಾಗಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ನಡೆಯುವ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಇಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಕೇಂದ್ರ ಶಿಕ್ಷಣ ಮಂತ್ರಾಲಯದ (ಎಂ.ಓ.ಇ) ನಿರ್ದೇಶನದಂತೆ ಸ್ವಯಂಚಾಲಿತ ಪದ್ಧತಿಯ (Automated Monitoring System) ಮೂಲಕ ಪರಿಣಾಮಕಾರಿ ಮೇಲ್ವಿಚಾರಣೆ ನಡೆಸಲು ಶಾಲೆಗಳಿಂದ ಮಧ್ಯಾಹ್ನ ಉಪಹಾರದ ಫಲಾನುಭವಿಗಳ ದೈನಂದಿನ ನೈಜ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ ಒಟ್ಟು 54129 ಶಾಲೆಗಳಿಂದ ಪ್ರತಿನಿತ್ಯ ಬಿಸಿಯೂಟದ ಫಲಾನುಭವಿಗಳ ದೈನಂದಿನ ಮಾಹಿತಿಯನ್ನು ಪಡೆಯಲಾಗುತ್ತಿದೆ. ಸ್ವಯಂ ಚಾಲಿತ ಉಸ್ತುವಾರಿ ಪದ್ಧತಿಯು ಮಧ್ಯಾಹ್ನ ಉಪಾಹಾರ ಯೋಜನೆಯ ಫಲಾನುಭವಿಗಳ ದಿನನಿತ್ಯದ ನೈಜ ದತ್ತಾಂಶಗಳನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯಾಗಿರುತ್ತದೆ.
ಪ್ರಸ್ತುತ ಬಿಸಿಯೂಟದ ಫಲಾನುಭವಿಗಳ ಮಾಹಿತಿಯನ್ನು ಕಳುಹಿಸುವ ಸಂದರ್ಭದಲ್ಲಿ ತಾಂತ್ರಿಕ ಅಡಚಣೆಗಳುಂಟಾದಲ್ಲಿ (ನೆಟ್ವರ್ಕ್ ಕೊರತೆ) ಹಿಂದಿನ ದಿನಾಂಕವನ್ನು ನಮೂದಿಸಿ. ನಮೂದಿಸಿದ ದಿನಾಂಕದ ಫಲಾನುಭವಿಗಳ ಮಾಹಿತಿಯನ್ನು ಎಸ್.ಎಂ.ಎಸ್ ಮೂಲಕ ಕಳುಹಿಸಲಾಗುತ್ತಿದೆ. ಆದರೆ ಇದು ನೈಜ ದತ್ತಾಂಶದ ಉಸ್ತುವಾರಿಯಾಗಿರುವುದರಿಂದ ಆ ದಿನವೇ ಸಂಜೆ 2.00 ಗಂಟೆಯೊಳಗೆ ಮಾಹಿತಿಯನ್ನು ರವಾನಿಸುವುದು ಕಡ್ಡಾಯವಾಗಿರುತ್ತದೆ. ಹಿಂದೆ ನಡೆದ ಶಾಲಾ ದಿನಗಳಿಗೆ ಸಂಬಂಧಿಸಿದಂತೆ ಬಿಸಿಯೂಟ ಪಡೆದ ಫಲಾನುಭವಿಗಳ ಮಾಹಿತಿಯನ್ನು ಮರುದಿನ ಎಸ್.ಎಂ.ಎಸ್ ಕಳುಹಿಸಲು ಸಾಧ್ಯವಿರುವುದಿಲ್ಲ.
“ಶಾಲೆ ನಡೆದೂ, ಬಿಸಿಯೂಟ ಪಡೆದ ನೈಜ ಫಲಾನುಭವಿಗಳ ಮಾಹಿತಿಯನ್ನು ಎಸ್.ಎಂ.ಎಸ್ ಕಳುಹಿಸದಿದ್ದಲ್ಲಿ ಹಾಗೂ ಫಲಾನುಭವಿಗಳ ಸಂಖ್ಯೆಗಿಂತ ಕಡಿಮೆ ಸಂಖ್ಯೆಯನ್ನು ಎಸ್.ಎಂ.ಎಸ್ ಕಳುಹಿಸಿದ್ದಲ್ಲಿ ಮಧ್ಯಾಹ್ನ ಬಿಸಿಯೂಟ ನಿಯಮಗಳು-2015ರ ನಿಯಮ-9ರಲ್ಲಿ ತಿಳಿಸಿರುವಂತೆ, ಆಹಾರ ಭದ್ರತಾ ಭತ್ಯೆಯನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ವೇತನದಿಂದ ಭರಿಸಿ ಫಲಾನುಭವಿಗಳ ಖಾತೆಗಳಿಗೆ ಪಾವತಿಸುವುದು”.