ಮಂಡ್ಯ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಅದೆಷ್ಟೋ ಜನರು ಇದೀಗ ಮನೆ ತೊರೆದಿದ್ದಾರೆ. ಅಲ್ಲದೆ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ ಜನರಿಗೆ ತೊಂದರೆ ನೀಡುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕಠಿಣ ಕ್ರಮ ಜಾರಿ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧ ಕಠಿಣ ಕಾನೂನು ಕ್ರಮ ಜಾರಿ ಮಾಡಲು ಚಿಂತನೆ ನಡೆಯುತ್ತಿದೆ. ಬಡ್ಡಿ ಹಾಕಿ ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಮಂಡ್ಯದಲ್ಲೂ ಈ ಬಗ್ಗೆ ಎಸ್ಪಿಗೆ ನಿರ್ದೇಶನ ನೀಡಿದ್ದೇವೆ. ಜನ ಈ ಬಗ್ಗೆ ಜಾಗೃತರಾಗಬೇಕು. ನಾವು ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. PLD ಬ್ಯಾಂಕ್, ಸೊಸೈಟಿ, ಇತರೆ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತೆ. ಹಾಗಾಗಿ ಮೈಕ್ರೋ ಫೈನಾನ್ಸ್ ಗೆ ಹೋಗೋದನ್ನು ಜನರು ನಿಲ್ಲಿಸಬೇಕು ಎಂದು ಸಚಿವರು ತಿಳಿಸಿದರು.