ವಾಷಿಂಗ್ಟನ್: ಇರಾನ್ ವಿರುದ್ಧ ಯುದ್ಧದ ಎಚ್ಚರಿಕೆ ಹಾಗೂ ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನು ಮಾಜಿ ಸಿಐಎ (CIA) ಮುಖ್ಯಸ್ಥ ಜಾನ್ ಬ್ರೆನ್ನನ್ ತೀವ್ರವಾಗಿ ಖಂಡಿಸಿದ್ದಾರೆ. ಟ್ರಂಪ್ ಅವರು “ಮಾನಸಿಕವಾಗಿ ಅಸ್ಥಿರರಾಗಿದ್ದಾರೆ” (Unhinged) ಎಂದು ಗಂಭೀರ ಆರೋಪ ಮಾಡಿರುವ ಅವರು, ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯನ್ನು ಬಳಸಿಕೊಂಡು ಅವರನ್ನು ತಕ್ಷಣವೇ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಟ್ರಂಪ್ ಅವರ ಇತ್ತೀಚಿನ ಆಕ್ರಮಣಕಾರಿ ಹೇಳಿಕೆಗಳು ಮತ್ತು ಇರಾನ್ ನಾಗರಿಕತೆಯನ್ನು ನಾಶಪಡಿಸುವ ಬೆದರಿಕೆಗಳು ಅವರು ದೇಶವನ್ನು ಮುನ್ನಡೆಸಲು ಅಶಕ್ತರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಬ್ರೆನ್ನನ್ ಹೇಳಿದ್ದಾರೆ.
ಅಮೆರಿಕ ಸಂವಿಧಾನದ 25ನೇ ತಿದ್ದುಪಡಿಯು ಅಧ್ಯಕ್ಷರು ತಮ್ಮ ಕರ್ತವ್ಯ ನಿರ್ವಹಿಸಲು ಅಶಕ್ತರಾದಾಗ (ಮಾನಸಿಕ ಅಥವಾ ದೈಹಿಕವಾಗಿ), ಉಪಾಧ್ಯಕ್ಷರು ಮತ್ತು ಸಂಪುಟದ ಬಹುಮತದೊಂದಿಗೆ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಅವಕಾಶ ನೀಡುತ್ತದೆ. “ಈ ತಿದ್ದುಪಡಿಯನ್ನು ಡೊನಾಲ್ಡ್ ಟ್ರಂಪ್ ಅಂತಹವರನ್ನು ಗಮನದಲ್ಲಿಟ್ಟುಕೊಂಡೇ ಬರೆಯಲಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.
ಅಧ್ಯಕ್ಷರ ಕೈಯಲ್ಲಿ ಪರಮಾಣು ಅಸ್ತ್ರಗಳ ನಿಯಂತ್ರಣ ಇರುವುದು ಜಗತ್ತಿಗೆ ಅಪಾಯಕಾರಿ ಎಂದು ಬ್ರೆನ್ನನ್ ಆತಂಕ ವ್ಯಕ್ತಪಡಿಸಿದ್ದಾರೆ.








