ಚಾಮರಾಜನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಅದರಲ್ಲೂ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಕೂಡ ಒಂದು ಇದೀಗ ಚಾಮರಾಜನಗರದಲ್ಲಿ ಪುರುಷ ಪ್ರಯಾಣಿಕನಿಗೆ ಶಕ್ತಿ ಯೋಜನೆ ಟಿಕೆಟ್ ನೀಡಿ ಕಂಡಕ್ಟರ್ ಯಡವಟ್ಟು ಮಾಡಿದ್ದಾರೆ.
ಹೌದು ಚಾಮರಾಜನಗರದಿಂದ ಮಾದಾಪುರ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಂದ 10 ರೂಪಾಯಿ ಹಣ ಪಡೆದ ಕಂಡಕ್ಟರ್, ಅವರಿಗೆ ಶಕ್ತಿ ಯೋಜನೆಯ ಟಿಕೆಟ್ ನೀಡಿದ್ದಾರೆ. ನಿಗದಿತ ಸ್ಟಾಪ್ ಇಲ್ಲ ಎಂದು ಸಬೂಬು ಹೇಳಿ ಈ ರೀತಿ ಶಕ್ತಿ ಯೋಜನೆಯ ಉಚಿತ ಟಿಕೆಟ್ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.ಕೆಎಸ್ಆರ್ ಟಿಸಿ ಕಂಡಕ್ಟರ್ ಒಬ್ಬರು ಪುರುಷ ಪ್ರಯಾಣಿಕರಿಗೆ ಮಹಿಳೆಯರ ಉಚಿತ ಟಿಕೆಟ್ ನೀಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ನಡೆದಿರುವ ಈ ವಂಚನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಗರಣದ ವಿರುದ್ಧ ಕೂಡಲೇ ಕೆಎಸ್ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ (ಡಿಸಿ) ದೂರು ನೀಡಲು ಪ್ರಯಾಣಿಕ ನಿರ್ಧರಿಸಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ.








