ಶಿವಮೊಗ್ಗ: ದೇಶದ ಇತಿಹಾಸವನ್ನು ಬರೆಯಬೇಕಾದಂತ ಮಾಧ್ಯಮ ಇಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂಬುದಾಗಿ ಚಿಂತಕ, ಬರಹಕಾರ, ಸಾಮಾಜಿಕ ಹೋರಾಟಗಾರ ಶಿವಸುಂದರ್ ಕಳವಳ ವ್ಯಕ್ತ ಪಡಿಸಿದ್ದಾರೆ.
ಇಂದು ಸಾಗರದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಐಕ್ಯು ಎಸಿ, ಕನ್ನಡ ಮತ್ತು ಇಂಗ್ಲೀಷ್ ವಿಭಾಗಗಳು ಹಾಗೂ ಡಿಜಿಟಲ್ ಮೀಡಿಯಾ ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಡೆದಂತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗದಂತ ಅವರು, ಮಾಧ್ಯಮ ಅಂದು-ಇಂದು ಎನ್ನುವ ವಿಷಯದ ಕುರಿತು ಮಾತನಾಡಿದರು.
ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ನಾವೆಲ್ಲರೂ ಒಂದು ಎನ್ನುವ ಬಂಧುತ್ವ ಭಾವವನ್ನು ವ್ಯಕ್ತಿಗತ ತತ್ವವನ್ನು ರೂಢಿಸಿಕೊಳ್ಳಬೇಕು. ಈ ದೇಶದಲ್ಲಿ ಅಸಮಾನತೆಯೇ ದೈವದತ್ತ ನಿರ್ಣಯವೆಂದೇ ಭಾವಿಸಲಾಗಿತ್ತು. ಇದು ನಮ್ಮ ನಮ್ಮ ಮನೆಗಳಲ್ಲಿ ಗೋಚರಿಸುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕು. ಸಾಮಾಜಿಕ ಸಮಾನತೆಯನ್ನು ಮನೆಯೊಳಗೂ ಕಾಪಾಡಬೇಕು ಎಂದರು.
ಗಂಟೆಗೆ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಈವರೆಗೆ 75,000 ಯುವಕರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ರಾಷ್ಟ್ರೀಯ ಸಂಶೋಧನಾ ವರದಿಗಳಿಂದ ತಿಳಿದು ಬಂದಿದೆ ಎಂದರು.
ಪ್ರಜಾತಂತ್ರ ಸೂತ್ರವೆಂದರೇ ಮಳೆ ಬರುವುದನ್ನು ನೋಡಿ ಹೇಳಬೇಕು. ಯಾರೋ ಹೇಳಿದ್ದು ಕೇಳಿ ಬರೆಯುವುದಲ್ಲ. ತಾವೇ ನೋಡಿ ಬರುತ್ತಿದ್ದರೇ ಬರುತ್ತಿದೆ ಅಂತ, ಬರುತ್ತಿಲ್ಲ ಅಂದ್ರೆ ಬರುತ್ತಿಲ್ಲ ಅಂತ ಬರೆಯಬೇಕು. ಮಳೆ ಬರುತ್ತಿಲ್ಲ ಅಂದ್ರೆ ಅದಕ್ಕೆ ಕಾರಣ ಏನು? ಅದರಿಂದ ಯಾರೆಲ್ಲ ಸಂಕಷ್ಟಕ್ಕೆ ಈಡಾಗುತ್ತಾರೆ ಎನ್ನುವುದನ್ನು ಸಂಶೋಧಿಸಿ ಬರೆಯಬೇಕು ಎಂದು ತಿಳಿಸಿದರು.
ಇಂದು ಮಾಧ್ಯಮಗಳು ಬಹುತೇಕ ಕಾರ್ಪೋರೇಟ್ ಪಾಲಾಗಿವೆ. ಗೋಧಿ ಮೀಡಿಯಾಗಳಾಗಿದ್ದಾವೆ. ಅದರಿಂದ ಆಚೆ ಬರಬೇಕು. ಆಗ ಮಾತ್ರ ನಿಜವಾದ ಮಾಧ್ಯಮ, ವರದಿಗಾರಿಕೆ ಸಾಧ್ಯ. ಮಾಧ್ಯಮಗಳು ಕಾರ್ಪೋರೇಟ್ ಹಂಗಿನಿಂದ ಹೊರಬರಬೇಕು ಎಂದರು.
ಮಾಧ್ಯಮಗಳ ಒಡೆತನ ಕೆಲವೇ ಕೆಲವರ ಕೈಗೊಂಬೆಯಾದಾಗ ಸತ್ಯಗಳು ಕೂಡ ಅಷ್ಟೇ ನೀಟಾಗಿ ತಿರುಚಲ್ಪಡುತ್ತವೆ. ಆ ಬಗ್ಗೆ ಎಚ್ಚರಿಕೆಯ ನಡೆಯನ್ನು ಮಾಧ್ಯಮಗಳು ಇರಿಸಬೇಕು ಎಂದು ಕಿವಿಮಾತು ಹೇಳಿದರು.
ಯುದ್ಧ ಪೀಡಿತ ಇಸ್ತ್ರೇಲ್ ಗೆ ಬೇರೆ ದೇಶಗಳಿಂದ ಜನರನ್ನು ಕೆಲಸಕ್ಕೆ ಕಳಿಸೋದಕ್ಕೆ ಮುಂದಾಗಲಿಲ್ಲ. ಆದ್ರೇ ಭಾರತ ಮಾತ್ರ ಅದಕ್ಕೆ ಒಪ್ಪಿಗೆ ಸೂಚಿಸಿತು. ಇಸ್ತ್ರೇಲ್ ಗೆ ತೆರಳಿ ಕೆಲಸ ಮಾಡೋದಕ್ಕೆ ಲಕ್ಷಾಂತರ ಭಾರತೀಯ ಯುವಕರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ದೇಶದಲ್ಲಿ ಕಾಡುತ್ತಿರುವಂತ ನಿರುದ್ಯೋಗ ಸಮಸ್ಯೆಯೇ ಕಾರಣ. ಇವುಗಳನ್ನು ಮಾಧ್ಯಮಗಳು ಎತ್ತಿ ತೋರಿಸಬೇಕು. ಅದರ ಹಿಂದಿನ ಯುವಕರ ಹತಾಶೆ, ನಿರುದ್ಯೋಗ ಸಮಸ್ಯೆಯನ್ನು ತಿಳಿಸುವ ಕೆಲಸ ಮಾಡಬೇಕು ಎಂದರು.
ಇಂದು ಜನಪರ ಪತ್ರಿಕೋದ್ಯಮ ಸ್ವಾತಂತ್ರ್ಯ ತನ್ನಿಂದ ತಾನೇ ಮಾರಿಕೊಂಡಿದೆ. ಪ್ರಜಾತಂತ್ರ ಅಂದ್ರೆ ವೋಟ್ ಹಾಕುವುದಲ್ಲ. ಸಮಾನತೆಯ ಸಂಬಂಧದ ಸೂಚಕವಾಗಿದೆ. ಮಾಧ್ಯಮಗಳು ಕಸವನ್ನು ಕೀಳುವ ಕೆಲಸ ಮಾಡಬೇಕು ಎಂದರು.
ಸಮಾಜದ ಸಮಸ್ಯೆಯನ್ನು ತೋರಿಸುವ ಕನ್ನಡಿಯ ಹಾಗೆ ಮಾಧ್ಯಮಗಳು ಇರಬೇಕು. ಆದರೆ ಮಾಧ್ಯಮಗಳು ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ಹಂಗಿನಲ್ಲಿ ಕೆಲಸ ಮಾಡುತ್ತಾ ಪ್ರಜಾಪ್ರಭುತ್ವವನ್ನು ದಿಕ್ಕು ತಪ್ಪಿಸುತ್ತಿದೆ ಎಂದರು.
ಭಾರತದಲ್ಲಿ ಶೇಕಡ 80ರಷ್ಟು ಮಾಧ್ಯಮಗಳು ಮಾರಿಕೊಂಡಿವೆ ಜನಪರವಾಗಿರುವ ಶೇಕಡ 20ರಷ್ಟು ಮಾಧ್ಯಮಗಳ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸುವ ಕೊಲೆ ಮಾಡುವ ಕೃತ್ಯ ನಡೆಯುತ್ತಿದೆ. ಮಾಧ್ಯಮಗಳು ಅಭಿವೃದ್ಧಿಯ ಮಾನದಂಡ ಏನು ಎಂಬುದನ್ನು ಪ್ರಭುತ್ವಕ್ಕೆ ತಮ್ಮ ವಿಶ್ಲೇಷಣೆ ಅಧ್ಯಯನದ ಮೂಲಕ ತಿಳಿಸಬೇಕು. ಆದರೆ ಮಾಧ್ಯಮಗಳು ಇಂದು ಪ್ರಭುತ್ವದ ಬಾಲ ಬಡುಕ ಅಂಗವಾಗಿದೆ ಎಂಬುದಾಗಿ ಹೇಳಿದರು.
ಮಧ್ಯಮವನ್ನು ನಾವು ವಾಚ್ ಡಾಗ್ ಎಂದು ಕರೆಯುತ್ತಿದ್ದ ಕಾಲವೊಂದಿತ್ತು. ಆದರೆ ಮಾಧ್ಯಮಗಳು ಇಂದು ಲ್ಯಾಪ್ ಡಾಗ್ ಆಗಿವೆ. ಭಾರತದ ಸಂವಿಧಾನದ ನಿಜವಾದ ಕನಸು ಸಮಾನತೆ ಆದರೆ ಭಾರತವು ಅಸಮಾನತೆಯನ್ನೇ ಕೇಂದ್ರವಾಗಿಟ್ಟುಕೊಂಡು ಉಸಿರಾಡುತ್ತಾ ಬಂದಿದೆ. ಇಂತಹ ಅಸಮಾನತೆಯನ್ನು ಪ್ರಶ್ನಿಸಿ ರಾಜಕೀಯ ಸಾಮಾಜಿಕ ಆರ್ಥಿಕ ಸಮಾನತೆಯನ್ನು ನೆಲೆಗೊಳಿಸುವಲ್ಲಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ನ್ಯಾಯಾಂಗ ಶಾಸಕಾಂಗ ಕಾರ್ಯಂಗ ದಾರಿ ತಪ್ಪಿದಾಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಮಾಧ್ಯಮ ತನ್ನ ವಸ್ತುನಿಷ್ಠ ವರದಿಗಳ ಮೂಲಕ ಗಮನ ಸೆಳೆಯಬೇಕು. ದೇಶದ ಇತಿಹಾಸವನ್ನು ಬರೆಯಬೇಕಾದಂತ ಮಾಧ್ಯಮ ಇಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಹಸಿವು ಬಡತನ ನಿರುದ್ಯೋಗ ತಾಂಡವ ಆಡುತ್ತಿದೆ ವಿಶ್ವಗುರು ಎಂದುಕೊಂಡಿರುವ ಭಾರತ ಹಸಿರಿನ ಸೂಚ್ಯಂಕದಲ್ಲಿ 111ನೇ ಸ್ಥಾನ ಪಡೆದಿರುವುದು ಅಂಕಿ ಅಂಶ ಹೇಳುತ್ತದೆ. ಇಂತಹ ವಿಚಾರವನ್ನು ಮಾಧ್ಯಮ ಪ್ರಭುತ್ವದ ಗಮನಕ್ಕೆ ತರುವ ಬದಲು ಅಂಬಾನಿ ಕುಟುಂಬದ ಮದುವೆ ಪ್ರಧಾನಿ ಏನು ತಿಂದರು ಯಾವ ಬಟ್ಟೆ ಧರಿಸಿದರೂ ಇಂತಹ ಕ್ಷುಲ್ಲಕ ಸುದ್ದಿಗಳ ಹಿಂದೆ ಬಿದ್ದಿರುವುದು ಮಾಧ್ಯಮ ರಂಗದ ಅಧಃಪತನಕ್ಕೆ ಉದಾಹರಣೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸರ್ವ ಋತು ಸೇತುವೆ ನಿರ್ವಹಿಸುವ ಬದಲು ಎಕ್ಸ್ಪ್ರೆಸ್ ರೈಲು ಬುಲೆಟ್ ರೈಲಿನ ಹಿಂದೆ ಬಿದ್ದಿದೆ ಎಂದರು.
ದೇಶದ ಸಂಪತ್ತು ಕೇವಲ ಕಡಾ ಮೂರರಷ್ಟು ಜನರ ಪಾಲಾಗುತ್ತಿದೆ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತಹ ಕಾನೂನು ತಂದು ತೆರಿಗೆಯ ಮೂಲಕ ಬಡವರನ್ನು ಸುಲಿಯುತ್ತಿದೆ. ದಾರಿ ತಪ್ಪುತ್ತಿರುವ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸರಿದಾರಿಗೆ ತರುವ ದೊಡ್ಡ ಸವಾಲನ್ನು ವಿದ್ಯಾರ್ಥಿ ಯುವ ಜನರು ಸ್ವೀಕರಿಸುವ ಕಾಲವಿದು ಎಂದು ಕರೆ ಕೊಟ್ಟರು.
ಡಿಟೇಲ್ ಮೀಡಿಯಾ ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಹೆಚ್.ಬಿ ರಾಘವೇಂದ್ರ ಮಾತನಾಡಿ, ನಮ್ಮ ಕಾಲದಲ್ಲಿ ಸಮಾಜ ಧಿಕ್ಕು ತಪ್ಪುತ್ತಿದ್ದಾಗ ಹೋರಾಟ ಮಾಡಿಕೊಂಡಿ, ಸರಿ ಪಡಿಸುವ ಕೆಲಸ ಮಾಡಿಕೊಂಡು ಬಂದ್ವಿ. ಆದ್ರೇ ಇಂದು ಬುಲೆಟ್ ಟ್ರೈನ್ ಥರ ಧಿಕ್ಕು ತಪ್ಪಿದೆ. ಅದನ್ನು ಸರಿಪಡಿಸುವ ಕೆಲಸ ವಿದ್ಯಾರ್ಥಿಗಳಾದ ನೀವು, ನಾವೆಲ್ಲರೂ ಮಾಡಬೇಕು ಎಂದರು.
ಇತ್ತೀಚೆಗೆ ಮಆಧ್ಯಮಗಳು ಕೇಳ ಬೇಕಾದ ಪ್ರಶ್ನೆಗಳನ್ನೇ ಕೇಳುತ್ತಿಲ್ಲ. ಗೋಧಿ ಮೀಡಿಯಾಗಳು ಬದಲಾಗಬೇಕು. ಮೀಸಲಾತಿ ಅನ್ನುವುದನ್ನು ಅಂಬೇಡ್ಕರ್ ಯಾಕೆ ಅಳವಡಿಸಿದ್ರು ಅನ್ನುವ ಬಗ್ಗೆ ತಿಳಿಯಬೇಕು. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಜೀವನದವನ್ನು ರೂಪಿಸಿಕೊಳ್ಳಬೇಕು ಎಂದರು.
ಹೊಸ ತಲೆಮಾರು ಮಾಧ್ಯಮ ರಂಗಕ್ಕೆ ಬಂದು ಜನ ಪರವಾದಂತಹ ಸುದ್ದಿಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಡಾ.ಸಣ್ಣ ಹನುಮಪ್ಪ ಮಾತನಾಡಿ, ಈ ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕತೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಶಿವಸುಂದರ್ ಪ್ರಸ್ತುತ ಪಡಿಸಿದ್ದಾರೆ ಎಂದರು.
ಇವತ್ತು ಮಾಧ್ಯಮಗಳು ಯಾರ ಕೈಯಲ್ಲಿವೆ. ಆರ್ಥಿಕವಾಗಿ ಭಾರತವನ್ನು ದೋಚುತ್ತಿರುವವರು ಯಾರು? ನಮ್ಮನ್ನು ಸುಲಿದು ಯಾರೆಲ್ಲ ಶ್ರೀಮಂತರಾಗುತ್ತಿದ್ದಾರೆ ಎಂಬುದನ್ನು ಶಿವಸುಂದರ್ ಉದಾಹರಣೆ, ನಿದರ್ಶನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂಬುದಾಗಿ ತಿಳಿಸಿದರು.
ವಿದ್ಯಾರ್ಥಿ ಯುವ ಜನರಲ್ಲಿ ವಿಷ ಕಾರುವಂತ ಸುದ್ದಿಗಳು ಹಬ್ಬುತ್ತಿರುವಂತಹ ಈ ಹೊತ್ತಿನಲ್ಲಿ ಮಾಧ್ಯಮದ ಜವಾಬ್ದಾರಿ ಬಹಳಷ್ಟು ಇದೆ ಎಂದರು.
ಈ ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಸುಪ್ರೀತ ಮತ್ತು ಸಂಗಡಿಗರು ಪ್ರಾರ್ಥನೆಯನ್ನು ಹಾಡಿದರು. ಉಪಸ್ಥಿತರಿದ್ದಂತ ಗಣ್ಯರನ್ನು ಸಹಾಯಕ ಪ್ರಾಧ್ಯಾಪಕ ಸುರೇಶ್ ಜಂಬಾನಿ ಅವರು ಸ್ವಾಗತಿಸಿದರು. ಚಿಂತಕ, ಬರಹಗಾರ, ಸಾಮಾಜಿಕ ಹೋರಾಟಗಾರ ಶಿವಸುಂದರ್ ಬಗ್ಗೆ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕುಂಸಿ ಉಮೇಶ್ ಪ್ರಾಸ್ತಾವಿಕ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ನೆರೆದಿದ್ದಂತ ಗಣ್ಯರಿಗೆ ಡಿಎಂಪಿಸಿ ಕಾರ್ಯದರ್ಶಿ ರಾಘವೇಂದ್ರ ತಾಳಗುಪ್ಪ ವಂದಿಸಿದರು.
ಈ ವೇಳೆ ನಿವೃತ್ತ ಪ್ರಾಧ್ಯಾಪಕರಾದಂತ ಮೇಜರ್ ಎಂ ನಾಗರಾಜ್, ಆಂಗ್ಲಾ ವಿಭಾಗದ ಮುಖ್ಯಸ್ಥರಾದಂತ ಪ್ರೊ.ಬಿಎಸ್ ಗಿರೀಶ್ ಪಾಟೀಲ್, ಡಿಎಂಪಿಸಿ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಕೆಳದಿಪುರ, ಸಂದೀಪ್ ಸಾಗರ ಸೇರಿದಂತೆ ಇತರರು ಉಪಸ್ಥಿತರಾಗಿದ್ದರು.