ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಡಕ್ ಎಚ್ಚರಿಕೆಗಳ ಬೆನ್ನಲ್ಲೇ ಇರಾನ್ ತನ್ನ ಪರಮಾಣು ನೀತಿಯಲ್ಲಿ ಮಹತ್ವದ ಬದಲಾವಣೆಯ ಮುನ್ಸೂಚನೆ ನೀಡಿದೆ. ಇರಾನ್‌ನ ಭೂಪ್ರದೇಶದ ಮೇಲೆ ಮತ್ತೆ ದಾಳಿ ನಡೆದರೆ, ಪ್ರತಿಕಾರವಾಗಿ 90 ಪ್ರತಿಶತದಷ್ಟು (90%) ಯುರೇನಿಯಂ ಸಮೃದ್ಧಗೊಳಿಸಲು ಇರಾನ್ ಸಂಸತ್ತು ಚಿಂತನೆ ನಡೆಸಲಿದೆ ಎಂದು ಅಲ್ಲಿನ ವಿದೇಶಾಂಗ ಮತ್ತು ಭದ್ರತಾ ಸಮಿತಿಯ ವಕ್ತಾರ ಇಬ್ರಾಹಿಂ ರೆಜಾಯಿ ತಿಳಿಸಿದ್ದಾರೆ.
ಇರಾನ್ ಪ್ರಸ್ತುತ ಶೇ. 60ರಷ್ಟು ಯುರೇನಿಯಂ ಸಮೃದ್ಧಗೊಳಿಸುತ್ತಿದೆ. ಆದರೆ ಶೇ. 90ರಷ್ಟು ಯುರೇನಿಯಂ ಸಮೃದ್ಧಗೊಳಿಸುವುದು ಎಂದರೆ ಅದು ‘ಶಸ್ತ್ರಾಸ್ತ್ರ ದರ್ಜೆ’ಯ (Weapons-grade) ತಂತ್ರಜ್ಞಾನವಾಗಿದೆ. ಅಂದರೆ ಇರಾನ್ ನೇರವಾಗಿ ಪರಮಾಣು ಬಾಂಬ್ ತಯಾರಿಕೆಯ ಹಂತಕ್ಕೆ ತಲುಪಲಿದೆ ಎಂಬ ಎಚ್ಚರಿಕೆಯನ್ನು ಜಗತ್ತಿಗೆ ನೀಡಿದೆ.
ಫೆಬ್ರವರಿ 28ರಂದು ನಡೆದ ಯುದ್ಧದ ನಂತರ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದಿದ್ದ ಕದನ ವಿರಾಮವು ಈಗ ಅಪಾಯದಲ್ಲಿದೆ. ಇರಾನ್ ನೀಡಿರುವ ಶಾಂತಿ ಪ್ರಸ್ತಾವನೆಯನ್ನು ಅತೀಂದ್ರಿಯ ಮತ್ತು “ಅಂಗೀಕಾರಾರ್ಹವಲ್ಲ” ಎಂದು ತಿರಸ್ಕರಿಸಿರುವ ಟ್ರಂಪ್, ಕದನ ವಿರಾಮವು ಕೇವಲ ಹೆಸರಿಗೆ ಮಾತ್ರ ಉಳಿದಿದೆ ಎಂದು ಗುಡುಗಿದ್ದಾರೆ.
“ಒಂದು ವೇಳೆ ಇಸ್ರೇಲ್ ಅಥವಾ ಅಮೆರಿಕ ಮತ್ತೆ ದಾಳಿ ನಡೆಸಿದರೆ, ಶೇ. 90ರಷ್ಟು ಯುರೇನಿಯಂ ಸಮೃದ್ಧಗೊಳಿಸುವುದು ನಮ್ಮ ಮುಂದಿರುವ ಪ್ರಮುಖ ಆಯ್ಕೆಗಳಲ್ಲಿ ಒಂದು” ಎಂದು ಇರಾನ್ ಸಂಸದೀಯ ಮೂಲಗಳು ಹೇಳಿವೆ.
ಒಂದು ವೇಳೆ ಇರಾನ್ ಶೇ. 90ರಷ್ಟು ಯುರೇನಿಯಂ ಸಮೃದ್ಧಗೊಳಿಸಿದರೆ, ಅದು ಪಶ್ಚಿಮ ಏಷ್ಯಾದಲ್ಲಿ ಭೀಕರ ಆಣ್ವಿಕ ಯುದ್ಧಕ್ಕೆ ದಾರಿ ಮಾಡಿಕೊಡಬಹುದು ಎಂಬ ಆತಂಕ ಜಾಗತಿಕ ಸಮುದಾಯದಲ್ಲಿ ಮೂಡಿದೆ.








