ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ. ಜಾತ್ರೆ ಸಂದರ್ಭದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಒದಗಿಸುವುದರ ಜತೆಗೆ ಲಕ್ಷಾಂತರ ಜನರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ದೇವಿ ದರ್ಶನ ಪಡೆದು ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ಕೋಟ್ಯಂತರ ಜನರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಯಲ್ಲಮ್ಮ ಗುಡ್ಡದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಫ್ಲ್ಯಾನ್ ರೂಪಿಸಲಾಗುವುದು ಎಂದರು.
ದೇವಸ್ಥಾನವು ಪ್ರತಿವರ್ಷ ಅಂದಾಜು ₹ 20 ಕೋಟಿ ಆದಾಯ ಹೊಂದಿದೆ. ಈ ಆದಾಯದಲ್ಲಿ ದೇವಸ್ಥಾನ ನಿರ್ವಹಣೆ ಬಳಿಕ ಉಳಿಯುವ ಹಣವನ್ನು ಮಾಸ್ಟರ್ ಪ್ಲ್ಯಾನ್ ಅನುಷ್ಠಾನಕ್ಕೆ ಬಳಸಬಹುದಾಗಿದೆ. ಇದಲ್ಲದೇ ಸರಕಾರದಿಂದಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು. ಇದಲ್ಲದೇ ಪ್ರವಾಸೋದ್ಯಮ ಇಲಾಖೆಯ ವತಿಯಿಂದಲೂ ಪ್ರತ್ಯೇಕ ಯೋಜನೆಯನ್ನು ಕೂಡ ರೂಪಿಸುವ ಮೂಲಕ ಒಟ್ಟಾರೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.