ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ಹೋಬಳಿಯಲ್ಲಿ ಆರ್.ಎಂ ಷಣ್ಮುಖ ಎಂಬುವರು ಒತ್ತುವರಿ ಮಾಡಿಕೊಂಡಿದ್ದಂತ 6 ಎಕರೆ 24 ಗುಂಟೆ ಅರಣ್ಯ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಪಡೆಯುವಲ್ಲಿ ಸಾಗರದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸಾಗರದ ಅರಣ್ಯಾಧಿಕಾರಿಗಳ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿ 6 ಎಕರೆ 24 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ, ಮರಳಿ ಇಲಾಖೆಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮೋಹನ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾಗರ ವಿಭಾಗ ವ್ಯಾಪ್ತಿಗೆ ಬರುವ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಮಲಂದೂರು ಗ್ರಾಮದ ಸ.ನಂ 157 ರಲ್ಲಿ ಆರ್.ಎಂ ಷಣ್ಮುಖ ಬಿನ್ ಮಂಜಪ್ಪ ಗೌಡ ಇವರು ಮಲಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ 6-24 ಎ/ಗುಂ ಪ್ರದೇಶವನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುತ್ತಾರೆ. ಸದರಿಯವರು ಶರಾವತಿ ಮುಳುಗಡೆ ಸಂತ್ರಸ್ತರ ಯೋಜನೆಯಡಿ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಇವರು ಜಮೀನುಗಳನ್ನು ಮಂಜೂರಾತಿ ಪಡೆದಿದ್ದು, ಇದರೊಂದಿಗೆ ಹಿಡುವಳಿ ಜಮೀನುಗಳನ್ನು ಹೊಂದಿರುವಂತೆ ದೊಡ್ಡ ಹಿಡುವಳಿದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಅರಣ್ಯ ಒತ್ತುವರಿಯನ್ನು ಕರ್ನಾಟಕ ಅರಣ್ಯ ಅಧಿನಿಯಮ 1963 ಕಲಂ 64(ಎ) ರ ಪ್ರಕಾರ ವಿಚಾರಣೆ ಕೈಗೊಂಡು ಒತ್ತುವರಿ ತೆರವಿಗೆ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಸದರಿ ಒತ್ತುವರಿ ಪ್ರದೇಶವನ್ನು ದಿನಾಂಕ:05.10.2025 ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ರವಿ,ಚೋರಡಿ ಆನಂದಪುರ ವಲಯ ಅರಣ್ಯಾಧಿಕಾರಿ ಗೀತಾ ವಿ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಶಿಕಾರಿಪುರ ಉಪ ವಿಭಾಗ ಹಾಗೂ ವಲಯ ಅರಣ್ಯಾಧಿಕಾರಿ, ಸಾಗರ, ಹೊಸನಗರ, ನಗರ, ಶಿಕಾರಿಪುರ, ಅಂಬ್ಲಿಗೊಳ ಮತ್ತು ಶಿರಾಳಕೊಪ್ಪ ವಲಯ ಹಾಗೂ ವಿಭಾಗದ ಎಲ್ಲಾ ವಲಯಗಳ ಸಿಬ್ಬಂದಿಗಳೊಂದಿಗೆ ತೆರಳಿ ತೆರವುಗೊಳಿಸಲಾಗಿದೆ.
ಅಲ್ಲದೇ ಸಾಗರ ತಹಶೀಲ್ದಾರ್ ಮತ್ತು ಸಿಬ್ಬಂದಿ, ವೃತ್ತ ಆರಕ್ಷಕ ನೀರೀಕ್ಷಕರು, ಗ್ರಾಮಾಂತರ ಠಾಣಾ ಸಾಗರ, ಆರಕ್ಷಕ ಉಪ ನಿರೀಕ್ಷಕರು, ಆರಕ್ಷಕ ಠಾಣೆ ಆನಂದಪುರಂ ಮತ್ತು ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು, ಆನಂದಪುರಂ ಮತ್ತು ಸಿಬ್ಬಂದಿ ಹಾಗೂ ಅಗ್ನಿಶಾಮಕದಳ ಸಾಗರ ಮತ್ತು ಸಿಬ್ಬಂದಿಯವರ ಸಹಯೋಗದೊಂದಿಗೆ ಒತ್ತುವರಿ ತೆರವು ಕಾರ್ಯವನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ. ಸದರಿ ಒತ್ತುವರಿ ಪ್ರದೇಶವನ್ನು ಕಾನೂನು ಪ್ರಕಾರ ಅರಣ್ಯ ಇಲಾಖಾ ವಶಕ್ಕೆ ಪಡೆಯಲಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಮಲಂದೂರು ಗ್ರಾಮದ ಸ.ನಂ 157 ರಲ್ಲಿ ಆರ್.ಎಂ ಷಣ್ಮುಖ ಬಿನ್ ಮಂಜಪ್ಪ ಗೌಡ ಇವರು ಮಲಂದೂರು ಮೀಸಲು ಅರಣ್ಯ ಪ್ರದೇಶದಲ್ಲಿ 6-24 ಎ/ಗುಂ ಪ್ರದೇಶದ ಸುತ್ತಲೂ ಟ್ರಂಚ್ ಹೊಡೆಯಲಾಗಿದೆ. ಇದು ಅರಣ್ಯ ಭೂಮಿ ಎಂಬುದಾಗಿ ನಾಮಫಲಕವನ್ನು ಅಳವಡಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು