ಬೆಳಗಾವಿ :“ಇದೇ ತಿಂಗಳು ಡಿಸೆಂಬರ್ 26 ಹಾಗೂ 27ರಂದು ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ಮಾಡಲಾಗುವುದು. ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಲ್ಲಿನ ಬೆಳಕವಾಡಿಯ ವೀರಸೌಧದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯಿಸಿ, ಗಾಂಧಿ ಭಾರತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
“ಮಹಾತ್ಮಾ ಗಾಂಧಿಜಿ ಅವರು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಲು ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿಯನ್ನು ಸ್ವೀಕರಿಸಿದ ಬೆಳಗಾವಿ ಅಧಿವೇಶನಕ್ಕೆ ನೂರು ವರ್ಷವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿದೆ. ನಾವೆಲ್ಲರೂ ಇದರ ಫಲವನ್ನು ಅನುಭವಿಸುತ್ತಿದ್ದು, ಈ ಶತಮಾನೋತ್ಸವದ ಸಂಭ್ರಮಾಚರಣೆ ಮಾಡುತ್ತಿದ್ದೇವೆ” ಎಂದರು.
“ನೂರು ವರ್ಷದ ಈ ಸಂಭ್ರಮವನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಗಾಂಧಿ ಭಾರತ ಎಂಬ ಕಾರ್ಯಕ್ರಮದ ಅಡಿ ವರ್ಷಪೂರ್ತಿ ಆಚರಣೆಗೆ ಮುಂದಾಗಿದ್ದೇವೆ. ಗಾಂಧಿ ಭಾರತದ ಚಿಹ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಿದ್ದಾರೆ. ನೂರು ವರ್ಷದ ಹಿಂದೆ ಮಹಾತ್ಮಾ ಗಾಂಧಿಜಿ ಅವರು ಅಲಂಕರಿಸಿದ ಸ್ಥಾನದಲ್ಲಿ ಈಗ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ” ಎಂದು ತಿಳಿಸಿದರು.
“ಈ ಹಿನ್ನೆಲೆಯಲ್ಲಿ ಇದೇ ತಿಂಗಳು 26 ಹಾಗೂ 27ರಂದು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ನಡೆಸಲಾಗುವುದು. ಗಾಂಧೀಜಿ ಅವರು ಬಂದು ಹೋಗಿದ್ದ ಸ್ಥಳಗಳಿಗೆ ಭೇಟಿ ನೀಡಲಾಗುವುದು.
ಎಲ್ಲೆಲ್ಲಿ ಸಭೆ ಮಾಡಬಹುದು ಎಂದು ಮೂರು ನಾಲ್ಕು ಜಾಗಗಳನ್ನು ನಾವು ಗುರುತಿಸುತ್ತಿದ್ದೇವೆ. ನಾಳೆ ನಾಡಿದ್ದು ನಮ್ಮ ರಾಷ್ಟ್ರೀಯ ನಾಯಕರು ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಈ ಕಾರ್ಯಕ್ರಮಗಳ ರೂಪುರೇಷೆ ಮಾಡಲು ಹೆಚ್.ಕೆ ಪಾಟೀಲ್, ವೀರಪ್ಪ ಮೋಯ್ಲಿ ಹಾಗೂ ಬಿ.ಎಲ್ ಶಂಕರ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮಿಸುವ ಬಗ್ಗೆ ಕೇಳಿದಾಗ, “ಅವರು ಬಂದು ಭಾಷಣ ಮಾಡುವ ಆಲೋಚನೆ ಇತ್ತು. ಸಮಯ ಹಾಗೂ ಭದ್ರತೆ ವಿಚಾರಗಳಿವೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ” ಎಂದರು.
ಬ್ರಿಟೀಷರ ಕಾಲದಲ್ಲಿ 9 ಕಂಪನಿಗಳಿಗೆ ನೀಡಲಾಗಿದ್ದ ಗುತ್ತಿಗೆ ಅರಣ್ಯಭೂಮಿ ಮರುವಶಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ