ಬಾರ್ಮರ್ (ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಪಚಪಾದ್ರದಲ್ಲಿರುವ ‘ಎಚ್‌ಪಿಸಿಎಲ್ ರಾಜಸ್ಥಾನ ರಿಫೈನರಿ’ (HRRL) ಸಂಕೀರ್ಣವನ್ನು ಉದ್ಘಾಟಿಸಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ, ಅಲ್ಲಿನ ಪ್ರಮುಖ ಘಟಕವೊಂದರಲ್ಲಿ ಇಂದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಹಾಗೂ ರಕ್ಷಣಾ ಕಾರ್ಯ ಚುರುಕುಗೊಂಡಿದೆ.
ಇಂದು ಸಂಜೆ ರಿಫೈನರಿ ಸಂಕೀರ್ಣದ ಒಳಭಾಗದಲ್ಲಿರುವ ಪೈಪ್‌ಲೈನ್ ಅಸೆಂಬ್ಲಿ ಘಟಕದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿದ್ದು, ಕಿಲೋಮೀಟರ್ ದೂರದವರೆಗೂ ಕಾಣಿಸುತ್ತಿತ್ತು.
ಏಪ್ರಿಲ್ 21ರಂದು (ನಾಳೆ) ಪ್ರಧಾನಿ ಮೋದಿ ಅವರು ಈ ಬೃಹತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲು ಆಗಮಿಸಬೇಕಿತ್ತು. ಉದ್ಘಾಟನೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದ ಸಂದರ್ಭದಲ್ಲೇ ಈ ಅವಘಡ ನಡೆದಿದೆ.
ರಿಫೈನರಿಯ ಸ್ವಂತ ಅಗ್ನಿಶಾಮಕ ದಳದ ಜೊತೆಗೆ ಬಾರ್ಮರ್ ಮತ್ತು ಬಲೋತ್ರಾದಿಂದ ಸುಮಾರು 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಯಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ, ಆದರೆ ಘಟಕದ ಯಂತ್ರೋಪಕರಣಗಳಿಗೆ ಭಾರಿ ಹಾನಿಯಾಗಿದೆ ಎಂದು ಶಂಕಿಸಲಾಗಿದೆ.








