ಮೈಸೂರು : ಮೈಸೂರು ಭಾಗದ ಆಧ್ಯಾತ್ಮಿಕ ಶಕ್ತಿ ಕೇಂದ್ರ ಸುತ್ತೂರಲ್ಲಿ ಜಾತ್ರೆ ಸಂಭ್ರಮ ಮೇಳೈಸಿದೆ. ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ 2ನೇ ದಿನ ಸಾಮೂಹಿಕ ವಿವಾಹ ನೆರವೇರಿದ್ದು, ಬರೋಬ್ಬರಿ 135 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಿವಿಧ ಮಠಾಧಿಪತಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ನಡೆಯಿತು. 135 ಜೋಡಿಗಳ ಪೈಕಿ 4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 11 ಅಂತರಜಾತಿ ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ 5 ಜೋಡಿಗಳು, 3 ವಿಶೇಷಚೇತನ ಜೋಡಿಗಳು ಹಾಗು 3 ಜೋಡಿ ಮರುಮದುವೆ ವಿಶೇಷ ಗಮನ ಸೆಳೆಯಿತು.
ಒಟ್ಟಾರೆ ಜಾತ್ರೆಯಲ್ಲಿ ನವ ಜೋಡಿ ಹೊಸ ಬದುಕು ಆರಂಭಿಸಿದ್ದು, ನೆರೆದ ಜನರು ಶುಭ ಹಾರೈಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳೊಂದಿಗೆ, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರ್.ವಿ. ದೇಶಪಾಂಡೆ, ಸಚಿವ ಮಂಕಾಳ ಎಸ್.ವೈದ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕ ನಂಜೇಗೌಡ, ಹಂಪನಗೌಡ, ಬಿಷಪ್ ರೆ.ಫಾ ಫ್ರಾನ್ಸಿಸ್ ಸೆರಾವ್ ಎಸ್.ಜೆ, ರೆ.ಫಾ ಡಾ.ಗೇಬ್ರಿಯಲ್ ಮಾರ್ ಗ್ರೆಗೋರಿಯಸ್ ಇದ್ದರು.







