ಬೆಂಗಳೂರು : ಇತ್ತೀಚಿಗೆ ಆನ್ಲೈನ್ ಆಪ್ ಗಳ ಹೆಸರಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದೂ, ಇದೀಗ ಡೇಟಿಂಗ್ ಆಪ್ ಮೂಲಕ ಪರಿಚಯವಾದ ಮಹಿಳೆ, ಮದುವೆಯಾಗುವುದಾಗಿ ನಂಬಿಸಿ ಸಾಫ್ಟ್ವೇರ್ ಎಂಜಿನಿಯರ್ಗೆ ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ 18.7 ಲಕ್ಷ ರೂ. ವಂಚಿಸಿದ್ದಾಳೆ. ಈ ಬಗ್ಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ರ ನವೆಂಬರ್ನಲ್ಲಿ Flutrr ಡೇಟಿಂಗ್ ಆಪ್ ಮೂಲಕ 29 ವರ್ಷದ ಸ್ವಾಫ್ಟ್ವೇರ್ ಎಂಜಿನಿಯರ್ಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಕೆ ತನ್ನನ್ನು ಮುಂಬೈ ಮೂಲದ ಅಂಜಲಿ ಕುಶ್ಲಾನಿ ಎಂದು ಪರಿಚಯಿಸಿಕೊಂಡು, ನಂತರ ವಾಟ್ಸಾಪ್ ಮೂಲಕ ನಿಯಮಿತವಾಗಿ ಈತನ ಸಂಪರ್ಕದಲ್ಲಿದ್ದಳು. ಇದಾದ ಕೆಲ ಸಮಯದ ಬಳಿಕ ಪ್ರೀತಿಯ ಹೆಸರಲ್ಲಿ ಸಂತ್ರಸ್ತನ ನಂಬಿಸಿದ್ದ ಮಹಿಳೆ, ಆತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು.
ಹೀಗಾಗಿ ಸಾಫ್ಟ್ವೇರ್ ಎಂಜಿನಿಯರ್ ಆಕೆಯ ಜೊತೆಗೆ ಭವಿಷ್ಯದ ಕನಸು ಕೂಡ ಕಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ ಕೆಲ ವಾರಗಳ ಬಳಿಕ ಆಕೆ ಆನ್ಲೈನ್ ಟ್ರೇಡಿಂಗ್ ಬಗ್ಗೆ ಪರಿಚಯಿಸಿ, ತನ್ನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಲು ಈತನನ್ನು ಪ್ರೇರೇಪಿಸಿದ್ದಳು. ಆರಂಭದಲ್ಲಿ ಸಂದೇಹಗೊಂಡಿದ್ದ ಸಂತ್ರಸ್ತ ಎಂಜಿನಿಯರ್ 40,000 ಹೂಡಿಕೆ ಮಾಡಿದ್ದು, ಇದಕ್ಕೆ ಚಿಕ್ಕ ಮಟ್ಟಿನ ಲಾಭವೂ ಆತನಿಗೆ ಸಿಕ್ಕಿತ್ತು. ಹೀಗಾಗಿ ಆಕೆಯ ಮೇಲೆ ಎಂಜಿನಿಯರ್ ಹೆಚ್ಚು ವಿಶ್ವಾಸ ಹೊಂದಿದ್ದ ಎನ್ನಲಾಗಿದೆ.
ಮದುವೆ ಭರವಸೆ ಮತ್ತು ಭಾವನಾತ್ಮಕ ಒತ್ತಡದ ಮೂಲಕ ಹೆಚ್ಚಿನ ಹಣ ಹೂಡಿಕೆಗೆ ಮಹಿಳೆ ಒತ್ತಾಯಿಸಿದ ಕಾರಣ ಸಂತ್ರಸ್ತ ಹಂತ ಹಂತವಾಗಿ ಒಟ್ಟು 18.7 ಲಕ್ಷ ರೂ. ಹೂಡಿಕೆ ಮಾಡಿದ್ದ. ಈ ಪೈಕಿ 10 ಲಕ್ಷ ರೂ. ಸಾಲ ಮಾಡಿ ನೀಡಿರುವ ಹಣ ಎಂಬುದೂ ಈಗ ಬಹಿರಂಗವಾಗಿದೆ. ಹೂಡಿಕೆ ಹೆಸರಲ್ಲಿ ನೀಡಿದ್ದ ಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಾಗ ಎಂಜಿನಿಯರ್ ಅನುಮಾನಗೊಂಡು ಈ ಬಗ್ಗೆ ವಿಚಾರಿಸಿದ ಬಳಿಕ ಆರೋಪಿ ಮಹಿಳೆ ಈತನ ಜೊತೆಗಿನ ಸಂಪರ್ಕ ಕಡಿತಗೊಳಿಸಿದ್ದಳು. ಹೀಗಾಗಿ ತಾನು ಮೋಸ ಹೋಗಿರುವ ಬಗ್ಗೆ ಅರಿತ ಸ್ವಾಫ್ಟ್ವೇರ್ ಎಂಜಿನಿಯರ್, ಈ ಕುರಿತು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.








