ಸಾಗರ : ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಿದೆ. ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಾಗರ ನಗರಕ್ಕೆ 2 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂದು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಸ್ಥಾನದ ಬಳಿ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಂತ ಅವರು, ಸಾಗರ ನಗರಸಭೆಯ 1.50 ಕೋಟಿ ರೂ. ಹಣವನ್ನು ಸಹ ರಸ್ತೆ ನಿರ್ಮಾಣಕ್ಕೆ ಮೀಸಲು ಇರಿಸಿದೆ. ಫೆಬ್ರವರಿ 3ರಂದು ಮಾರಿಕಾಂಬಾ ಜಾತ್ರೆ ಪ್ರಾರಂಭಗೊಳ್ಳಲಿದೆ. ಅಷ್ಟರೊಳಗೆ ನಗರವನ್ನು ಸುಂದರವಾಗಿ ನಿರ್ಮಿಸಬೇಕಾಗಿದೆ. ಈಗಾಗಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಾಂಬಾರೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಸಣ್ಣಮನೆ ಸೇತುವೆ ಬಳಿ ಕಾಮಗಾರಿ ವೀಕ್ಷಣೆ ನಡೆಸಿ ಶೀಘ್ರ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪೊಲೀಸ್ ಸ್ಟೇಷನ್ ವೃತ್ತವನ್ನು ಅಭಿವೃದ್ದಿಪಡಿಸುವುದು, ಪೊಲೀಸ್ ಠಾಣೆಯನ್ನು ಬೇರೆ ಕಡೆ ವರ್ಗಾಯಿಸಲು ಸಹ ಸೂಚಿಸಿದೆ ಎಂದು ತಿಳಿಸಿದರು.
ಸಾಗರದ ಮಾರಿಕಾಂಬಾ ದೇವಸ್ಥಾನ ಎದುರಿನ ರಸ್ತೆ ಹಾಗೂ ಉಪ್ಪಾರ ಕೇರಿಯ ಪೋತರಾಜನ ಮನೆಯಿಂದ ನೆಹರೂ ನಗರದವರೆಗಿನ ರಸ್ತೆಯನ್ನು ಡಾಂಬಾರೀಕರಣ ಮಾಡಲು ಸೂಚಿಸಲಾಗಿದೆ. ಕಾಮಗಾರಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುತ್ತದೆ. ಜಾತ್ರೆಗಾಗಿ ರಾಜ್ಯ ಹೊರರಾಜ್ಯಗಳಿಂದ ಪ್ರವಾಸಿಗರು, ಭಕ್ತರು ಬರುತ್ತಾರೆ. ಅವರಿಗೆ ನಮ್ಮೂರಿನ ಬಗ್ಗೆ ಗೌರವ ಬರಬೇಕು. ಅಂತಹ ವಾತಾವರಣ ನಿರ್ಮಿಸುತ್ತೇವೆ ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ವಿರೇಶಕುಮಾರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆಯ ಮದನ್, ವಿಠ್ಠಲ್ ಹೆಗಡೆ, ರಾಜೇಶ್, ಮಾರಿಕಾಂಬಾ ನ್ಯಾಸ ಪ್ರತಿಷ್ಟಾನದ ನಾಗೇಂದ್ರ ಕೆ.ಎನ್. ಇನ್ನಿತರರು ಹಾಜರಿದ್ದರು.
ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ








