ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಯುದ್ಧ ಮತ್ತು ಸಂಘರ್ಷದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ನಡುವೆ ಉಲ್ಬಣಿಸಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿದ ಅವರು, “ಇದು ನಿಸ್ಸಂದೇಹವಾಗಿ ಇಡೀ ಜಗತ್ತಿಗೆ ಅತ್ಯಂತ ಸವಾಲಿನ ಸಮಯ” ಎಂದು ಬಣ್ಣಿಸಿದ್ದಾರೆ.
ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿನ ಸ್ಥಿತಿ ಹದಗೆಡುತ್ತಿರುವುದು ಕೇವಲ ಆ ಪ್ರದೇಶಕ್ಕೆ ಮಾತ್ರವಲ್ಲ, ಜಾಗತಿಕ ಸ್ಥಿರತೆಗೂ ಆತಂಕಕಾರಿ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.”ನಾವು ಇಂದು ಎದುರಿಸುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಅತ್ಯಂತ ಸಂಕೀರ್ಣವಾಗಿವೆ. ಇಂತಹ ಸವಾಲಿನ ಸಮಯದಲ್ಲಿ ಮಾನವೀಯತೆ ಮತ್ತು ಶಾಂತಿಯ ಹಾದಿ ಹಿಡಿಯುವುದು ಅನಿವಾರ್ಯ” ಎಂದು ಅವರು ಹೇಳಿದರು.
ಸಂಘರ್ಷ ಪೀಡಿತ ಪ್ರದೇಶಗಳಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಸರ್ಕಾರ ನಿಗಾ ಇಟ್ಟಿದೆ ಎಂಬ ಭರವಸೆಯನ್ನು ನೀಡುತ್ತಾ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಯಲಿ ಎಂದು ಆಶಿಸಿದರು.
ಸವಾಲುಗಳ ನಡುವೆಯೂ ಭಾರತವು ಜಾಗತಿಕ ಶಾಂತಿಗಾಗಿ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.








