ಮಂಗಳೂರು : ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿರುವ ಶಂಕೆ ವ್ಯಕ್ತವಾಗಿದೆ.
ಆದ್ದರಿಂದ ಕೋಚಿಮುಲ್ ನೇಮಕಾತಿ ಹಗರಣಕ್ಕೆ ಮಂಗಳೂರು ವಿವಿ ಲಿಂಕ್ ಇದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಂಗಳೂರು ವಿಶ್ವವಿದ್ಯಾಲಯಕ್ಕೆ ದಿಢೀರ್ ಭೇಟಿ ನೀಡಿ ಗುರುವಾರದಿಂದ ಶುಕ್ರವಾರ ಬೆಳಗ್ಗೆವರೆಗೆ ಪರಿಶೀಲನೆ ನಡೆಸಿದ್ದಾರೆ.
ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಮಂಗಳೂರು ವಿವಿ ನೇರ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ತಿಂಗಳ ಹಿಂದೆಯೇ ವಿವಿ ಪರೀಕ್ಷಾಂಗ ಕುಲಸಚಿವರಿಗೆ ಇ.ಡಿ. ನೊಟೀಸ್ ಜಾರಿ ಮಾಡಿತ್ತು. ವಿವಿ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರತಿ ಪ್ರಶ್ನೆ ಪತ್ರಿಕೆಯನ್ನು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಿರುವ ಅನುಮಾನ ವ್ಯಕ್ತವಾಗಿದೆ. ವಿವಿ ಅಧಿಕಾರಿಗಳ ಇ-ಮೇಲ್, ದೂರವಾಣಿ, ಬ್ಯಾಂಕಿಂಗ್ ವ್ಯವಹಾರ ಪರಿಶೀಲನೆ ನಡೆಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆಯ ಮಂಗಳೂರು ವಿವಿಯಲ್ಲಿ ಕಳೆದ 6 ತಿಂಗಳ ಹಿಂದೆ ನಡೆದಿದ್ದ ನೇಮಕಾತಿ ಪ್ರಕ್ರಿಯೆಯ ಪ್ರಶ್ನೆಪತ್ರಿಕೆ ಸಿದ್ದವಾಗಿತ್ತು. ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆಯ ಜವಾಬ್ದಾರಿಯನ್ನು ಮಂಗಳೂರು ವಿವಿ ಹೊತ್ತುಕೊಂಡಿತ್ತು. ಸದ್ಯ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೇಮಕಾತಿ ಪ್ರಕ್ರಿಯೆ ಅವ್ಯವಹಾರ ತನಿಖೆ ನಡೆಸುತ್ತಿರುವ ಇ.ಡಿ. ಅಧಿಕಾರಿಗಳು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ರಾಜುಕೃಷ್ಣ ಚಲನ್ನವರ್ ವಿಚಾರಣೆ ನಡೆಸುತ್ತಿದ್ದಾರೆ.