ಮಂಗಳೂರು: ಮಂಗಳೂರಿನ ಶಾಲಾ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಆರು ಮಂದಿ ಮೇಲೆ ಪ್ರಕರಣ ದಾಖಲಾಗಿದೆ.
ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಕಾರ್ಪೊರೇಟರ್ಗಳಾದ ಸಂದೀಪ್ ಗರೋಡಿ, ಭರತ್ ಕುಮಾರ್ ಸೇರಿದಂತೆ ಮತ್ತೋರ್ವನ ಮೇಲೆ ಅನಿಲ್ ಜೆರಾಲ್ಡ್ ಲೋಬೊ ಎಂಬವರು ನೀಡಿರುವ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಫೆ.12ರಂದು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಶಾಲೆಯ ಮುಂದೆ ಜಮಾಯಿಸಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕನ್ನು ಶಾಲೆಯ ವಿರುದ್ಧ ಎತ್ತಿಕಟ್ಟುವಂತಹ ಪ್ರಯತ್ನ ನಡೆಸಿದ್ದರು ಎಂದು ಆಪಾದಿಸಲಾಗಿತ್ತು. ಘಟನೆ ಸಂಬಂಧ ದೂರು ಕೂಡ ದಾಖಲಾಗಿತ್ತು. ಶಾಲೆಯ ಶಿಕ್ಷಕಿಯೊಬ್ಬರು ಹಿಂದೂ ಧರ್ಮ ಮತ್ತು ದೇವರನ್ನು ಅವಹೇಳಿಸಿದ್ದಾರೆ ಎಂದು ಆರೋಪಿಸಿ ಶಾಲೆಯ ವಿದ್ಯಾರ್ಥಿಗಳ ಹೆತ್ತವರು ಶಾಲೆ ಮುಂಧೆ ಗಲಾಟೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ.
ಈ ನಡುವೆ ನಗರದ ಸೇಂಟ್ ಜೆರೋಸಾ ಶಾಲೆ ವಿವಾದದ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ದಯಾನಂದ ರಾಮಚಂದ್ರ ನಾಯ್ಕ (ಡಿ.ಆರ್.ನಾಯ್ಕ) ಅವರನ್ನು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜಿನ ಪ್ರವಾಚಕರಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಗೆ ಕಲಬುರಗಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ಯೋಜನೆ ವಿಭಾಗದಲ್ಲಿ ಉಪನಿರ್ದೇಶಕರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ವರ್ಗಾಯಿಸಲಾಗಿದೆ.