ಮಂಗಳೂರು : ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಬುಧವಾರ ಮೃತಪಟ್ಟಿದ್ದಾರೆ.ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಮೃತಪಟ್ಟ ಉಪನ್ಯಾಸಕಿ ಎಂದು ತಿಳಿದುಬಂದಿದೆ.
ಬಜ್ಪೆ ಪಡು ಪೆರಾರ ನಿವಾಸಿ ಗ್ಲೋರಿಯಾ ಆಶಾ ರೋಡ್ರಿಗಸ್ ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಇದೇ ಕಾಲೇಜಿನಲ್ಲಿ ಬಿ.ಕಾಂ ಪದವಿಗೆ ಕಾಮರ್ಸ್ ವಿಷಯದಲ್ಲಿ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡಿದ್ದರು.
ನ.8ರಂದು ಕಾಲೇಜಿನಲ್ಲಿ ಮೆಟ್ಟಲು ಇಳಿಯುತ್ತಿದ್ದಾಗ ತಲೆಸುತ್ತು ಬಂದು ಬಿದ್ದ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.
ಅಂಗಾಂಗ ದಾನ
ಗ್ಲೋರಿಯಾ ರೋಡ್ರಿಗಸ್ ಅವರ ದೇಹದ ಅಂಗಾಂಗವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣು, ಹೃದಯ, ಚರ್ಮ, ಯಕೃತ್, ಎರಡು ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಲಾಗಿದೆ. ಯಕೃತ್(ಲಿವರ್) ಮಂಗಳೂರಿನ ಎಜೆ ಆಸ್ಪತ್ರೆಗೆ ನೀಡಲಾಗಿದೆ.
ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರಗೆ ನೀಡಲಾಗಿದೆ. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಕಿಡ್ನಿಯನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ ಚರ್ಮ ಹಾಗೂ ಕಣ್ಣುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಡಲಾಗಿದೆ.