ಮಂಗಳೂರು : ಕಾಟಿಪಳ್ಳದಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದ ಅಬ್ದುಲ್ ಜಲೀಲ್ನನ್ನು ಚಾಕು ಇರಿದು ಹತ್ಯೆಗೈದ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಲಕ್ಷ್ಮೀಶ ದೇವಾಡಿಗ (28) ಬಂಧಿತ ಆರೋಪಿ. ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಶೈಲೇಶ್ ಪೂಜಾರಿ, ಸವೀನ್ ಕಾಂಚಾನ್, ಪವನ್ ಅಲಿಯಾಸ್ ಪಚ್ಚು ಅವರನ್ನು ಕಾಪುವಿನ ಲಾಡ್ಜ್ನಲ್ಲಿ ಭಾನುವಾರ ರಾತ್ರಿ ಬಂಧಿಸಲಾಗಿತ್ತು.
ಡಿಸೆಂಬರ್ 24ರಂದು ಫ್ಯಾನ್ಸಿಯಲ್ಲಿ ಕರ್ತವ್ಯದಲ್ಲಿದ್ದ ವೇಳೆಯೇ ಜಲೀಲ್ ಅವರಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು. ಘಟನೆ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸುರತ್ಕಲ್, ಕಾವೂರು, ಬಜಪೆ ಮತ್ತು ಪಣಂಬೂರು ಪ್ರದೇಶಗಳಲ್ಲಿ ಡಿಸೆಂಬರ್ 29ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ವಿಧಿಸಲಾಗಿದೆ.