ಮಂಗಳೂರು : ಶತಮಾನೋತ್ಸವದ ಸಂಭ್ರಮದಲ್ಲಿರುವ ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿರುವ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಿರುವ ಶಾರದಾ ಮಾತೆ ಚಿನ್ನದ ಜರಿಯ ಬನಾರಸ್ ಸೀರೆಯಲ್ಲಿ ಕಂಗೊಳಿಸಲಿದ್ದಾಳೆ.
1922ರಲ್ಲಿ ಪ್ರಾರಂಭವಾದ ಉತ್ಸವಕ್ಕೆ ಈ ಬಾರಿ 100 ವರ್ಷ ತುಂಬಿದೆ. ಈ ಹಿನ್ನಲೆ ಸುಮಾರು ₹ 8 ಲಕ್ಷ ಮೌಲ್ಯದ ಬಂಗಾರದ ಝರಿಯ ಸೀರೆಯಿಂದ ಶಾರದೆ ವಿಗ್ರಹವನ್ನು ಅಲಂಕರಿಸಲು ಸಮಿತಿ ಮುಂದಾಗಿದೆ. ಈ ಬಾರಿಯೂ ಮಂಗಳೂರಿನ ಕುಲ್ಯಾಡಿಕಾರ್ ಸಿಲ್ಕ್ಸ್ನವರೇ ಈ ವೆಚ್ಚದ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.
ಅಕ್ಟೋಬರ್ 6 ರಂದು ಶೋಭಾಯಾತ್ರೆಯ ದಿನದಂದು ದೇವಿಗೆ ಅಂದಾಜು 8 ಲಕ್ಷ ರೂಪಾಯಿ ಮೌಲ್ಯದ ಈ ಸುಂದರ ಸೀರೆಯನ್ನು ಉಡಿಸಲಾಗುತ್ತದೆ. ವಾರಾಣಸಿಯ ಜ್ಞಾನವಾಪಿ ಮಸೀದಿ ಸಮೀಪ ನೆಲೆಸಿರುವ ಮುಸ್ಲಿಂ ಕುಟುಂಬವೊಂದು ಈ ಸೀರೆಯನ್ನು ಸಿದ್ಧಪಡಿಸುತ್ತಿದೆ. ಈ ನೇಕಾರರ ಕುಟುಂಬದ ಐದನೇ ತಲೆಮಾರಿನ ಸದಸ್ಯರು ಇದನ್ನು ತಯಾರಿಸುತ್ತಿದ್ದು, ನೇಕಾರಿಕೆಯಲ್ಲಿ ಪರಿಣತಿ ಹೊಂದಿರುವ ಕಾರಣ, ಸೀರೆಯ ಕಸೂತಿಯನ್ನು ಪ್ರತಿವರ್ಷ ಇವರಿಂದಲೇ ಮಾಡಿಸಲಾಗುತ್ತಿದೆ.
ವಿಗ್ರಹಕ್ಕೆ ಉತ್ತರ ಪ್ರದೇಶದ ಜ್ಞಾನವಾಪಿಯ ಮುಸ್ಲಿಂ ನೇಕಾರರು ಚಿನ್ನದ ಕಸೂತಿ ಹೊಂದಿರುವ ಹಸಿರು ರೇಷ್ಮೆ ಸೀರೆಗೆ ಅಂತಿಮ ಸ್ಪರ್ಶ ನೀಡುವಲ್ಲಿ ತೊಡಗಿದ್ದಾರೆ. 100ನೇ ವರ್ಷದ ಶಾರದಾ ಮಹೋತ್ಸವದ ಅಂಗವಾಗಿ ಭಕ್ತರು ಹಾಗೂ ಹಿತೈಷಿಗಳು ಚಿನ್ನದಿಂದ ಮಾಡಿದ ವೀಣೆ ಹಾಗೂ ನವಿಲುಗರಿಯನ್ನು ಕಾಣಿಕೆಯಾಗಿ ನೀಡಲಿದ್ದಾರೆ.
ಈ ಬಾರಿ ನವರಾತ್ರಿಯ ಮೊದಲ ದಿನದಿಂದ 10 ದಿನಗಳವರೆಗೆ ಉತ್ಸವ ನಡೆಯಲಿದೆ. ನಿತ್ಯ ದೇವಿಯ ಒಂದೊಂದು ಅವತಾರ ಬಿಂಬಿಸುವ ಅಲಂಕಾರ ಮಾಡಲಾ ಗುತ್ತದೆ. ಅಕ್ಟೊಬರ್ 5ರಂದು ವಿಶೇಷ ದೀಪಾಲಂಕಾರ ನಡೆಯಲಿದೆ.