ಮಂಡ್ಯ :- ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಮದ್ದೂರು ತಾಲೂಕು ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿ ನಿವಾಸಿಯಾದ ರಾಜು (45) ಎಂಬುವವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಅವರ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಿ ಗ್ರಾಮದ ಗೋಮಾಳದ ಸರ್ವೆ ನಂ 203 ರಲ್ಲಿ ಗ್ರಾಮಸ್ಥರು ಸಿದ್ದತೆ ನಡೆಸಿದ್ದರು.
ಆದರೆ, ಸರ್ವೆ ನಂ 203 ರ 2.30 ಗುಂಟೆ ಗೋಮಾಳದ ಜಾಗವನ್ನು ಪುಟ್ಟತಾಯಮ್ಮ ಎಂಬುವವರಿಗೆ ಸರ್ಕಾರ ಮಂಜೂರು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಹಾಲಿ ಜಮೀನಿನ ಮಾಲೀಕ ನಾಗರಾಜ್ ತಡೆ ಮಾಡಿದ್ದಾರೆ. ಹೀಗಾಗಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದರಿಂದ ಶವವನ್ನು ಗ್ರಾಮಸ್ಥರು ಟ್ರಾಕ್ಟರ್ ಮೂಲಕ ರಾತ್ರಿ 8 ಗಂಟೆ ವೇಳೆಗೆ ತಾಲೂಕು ಕಛೇರಿ ಮುಂದೆ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಗ್ರಾಮದ ಮುಖಂಡರು ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ನಾವು ಸರ್ವೆ ನಂ 203 ರ ಗೋಮಾಳದ ಜಾಗದಲ್ಲಿ ಶವ ಸಂಸ್ಕಾರದ ಪ್ರಕ್ರಿಯೆ ನಡೆಸುತ್ತಿದ್ದೇವೆ. ಆದರೆ, ಈಗ ನಾಗರಾಜ್ ಎನ್ನುವ ವ್ಯಕ್ತಿ ಈ ಜಮೀನನ್ನು ಸರ್ಕಾರ ನಮಗೆ ಮಂಜೂರು ಮಾಡಿಕೊಟ್ಟಿದೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ನಾವು ಈ ಜಮೀನು ಬಿಟ್ಟು ಬೇರೆ ಕಡೆ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಹೀಗಾಗಿ ತಾಲೂಕು ಆಡಳಿತ ನಮಗೆ ಸ್ಮಶಾನ ಭೂಮಿಯನ್ನು ನೀಡಬೇಕು ಇಲ್ಲದಿದ್ದರೆ ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಂಡ್ಯ ಉಪ ವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಗ್ರಾಮಸ್ಥರ ಮನವಿ ಆಲಿಸಿ ಈಗಾಗಲೇ ಈ ಜಮೀನು ವಿಚಾರವಾಗಿ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ತೀರ್ಪು ನೀಡಲಾಗಿದೆ. ಆದರೆ, ನಾಗರಾಜ್ ಎಂಬುವವರು ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಯುತ್ತಿರುವುದರಿಂದ ತೀರ್ಪು ಬರುವವರೆಗೂ ನಾವು ಯಾವುದೇ ತೀರ್ಮಾನ ಕೈಗೊಳ್ಳಲಾಗುವುದಿಲ್ಲ ಯಾರ ಪರ ತೀರ್ಪು ಬರುತ್ತದೆಯೋ ಅವರಿಗೆ ಜಮೀನು ಹಸ್ತಾಂತರ ಮಾಡಲಾಗುವುದು ಎಂದು ಗ್ರಾಮಸ್ಥರನ್ನು ಮನವೊಲಿಸಿದ ಬಳಿಕ ಗ್ರಾಮಸ್ಥರು ಶವವನ್ನು ಗೆಜ್ಜಲಗೆರೆ ಬಳಿಯ ವಿ.ಸಿ ಕಾಲುವೆ ದಡದಲ್ಲಿ ರಾತ್ರಿ 11 ಗಂಟೆ ವೇಳೆಗೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮದ್ದೂರು ಗ್ರಾಮಾಂತರ ಇನ್ಸ್ಪೆಕ್ಟರ್ ವೆಂಕಟೇಗೌಡ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ವರದಿ : ಗಿರೀಶ್ ರಾಜ್ ಮಂಡ್ಯ