ಮಂಡ್ಯ: ಬಿರುಗಾಳಿ ಸಹಿತ ಭಾರೀ ಮಳೆಗೆ ಮರಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಇಂದು ಕಾರ್ತಿಕ್ ಹುಟ್ಟು ಹಬ್ಬವಿತ್ತು. ಹೀಗಾಗಿ ಹೊಸ ಬಟ್ಟೆ ಖರೀದಿಸಿ, ಬಳಿಕ ತಂದೆ ಆರೋಗ್ಯ ವಿಚಾರಿಸಿಕೊಂಡು ತೆರಳುವಾಗ ದುರ್ಘಟನೆ ಜರುಗಿದೆ.
ಮಂಡ್ಯ ತಾಲೋಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ (27) ಮೃತ ಯುವಕರಾಗಿದ್ದಾರೆ. ಮಂಡ್ಯ ನಗರದ ಜಿಲ್ಲಾಸ್ಪತ್ರೆ ರಸ್ತೆಯ ಶಿಲ್ಪಶ್ರೀ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಆರೋಗ್ಯ ವಿಚಾರಿಸಿ ವಾಪಾಸ್ಸಾಗುತ್ತಿದ್ದ ಕಾರ್ತಿಕ್.
ಬಿರುಗಾಳಿ ಸಹಿತ ಭಾರೀ ಮಳೆ ಹಿನ್ನೆಲೆ ಬೈಕ್ ನಿಲ್ಲಿಸಿ ಸ್ನೇಹಿತನ ಕಾರು ಹತ್ತಿ ಕಾರ್ತಿಕ್ ಕುಳಿತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರಿನ ಹೊರಗಡೆ ನಿಂತಿದ್ದ ಸ್ನೇಹಿತ ಪ್ರಾಣಾಪಾಯಾದಿಂದ ಪಾರಾಗಿದ್ದಾನೆ.ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.