ಮಂಡ್ಯ: ಕರ್ತವ್ಯದ ವೇಳೆ ಮೃತಪಟ್ಟಿದ್ದ ಗ್ರಾಮ ಪಂಚಾಯಿತಿ ನೌಕರನ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಪಂ ಕಚೇರಿಯ ಕಂಪ್ಯೂಟರ್, ಪೀಠೋಪಕರಣಗಳನ್ನು ಗುರುವಾರ ಜಪ್ತಿ ಮಾಡಲಾಯಿತು.

ಜ. 20 2024 ರಂದು ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಮರಳಿಗ ಗ್ರಾಮ ಪಂಚಾಯಿತಿ ಕಚೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಮೇರೆಗೆ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಕಚೇರಿಯ ಕಂಪ್ಯೂಟರ್‌, ಪೀಠೋಪಕರಣಗಳನ್ನು ವಶಕ್ಕೆ ಪಡೆದರು. ಕಚೇರಿಗೆ ಎಂದಿನಂತೆ ಬಂದಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ಜಪ್ತಿ ವಿಷಯ ಕೇಳಿದ ತಕ್ಷಣ ಕಂಗಾಲಾಗಿ, ಕಚೇರಿಯ ಹೊರ ನಡೆದರು.

*ಏನಿದು ಪ್ರಕರಣ:*

2009 ರಲ್ಲಿ ಮರಳಿಗ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಎಂಬುವವರು ಬೀದಿ ದೀಪಗಳ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು.

ಈ ವಿಚಾರವಾಗಿ ಗ್ರಾಮ ಪಂಚಾಯಿತಿಯವರು ಪರಿಹಾರ ನೀಡುವಂತೆ ಆತನ ಪತ್ನಿ ಸುಜಾತ ಮನವಿ ಸಲ್ಲಿಸಿದ್ದರು.
ಸುಜಾತ ಅವರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಬೇಜವಾಬ್ದಾರಿತನ ತೋರಿದ್ದರು.

ಈ ಸಂಬಂಧ ಮೃತ ರವಿ ಅವರ ಕುಟುಂಬದವರು 2009 ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸತತ ವಿಚಾರಣೆ ನಡೆದು ಕರ್ನಾಟಕ ಹೈಕೋರ್ಟ್‌ ಪೀಠವು 2009 ರಿಂದ 2023 ರವರೆಗೆ ಶೇ 15ರ ಹೆಚ್ಚುವರಿ ಬಡ್ಡಿ ಸೇರಿ 11 ಲಕ್ಷದ 46 ಸಾವಿರದ 623 ರೂ ಪರಿಹಾರ ಹಣ ತುಂಬಿಕೊಡುವಂತೆ ಆದೇಶಿಸಿದೆ.

ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರದ ಪೂರ್ಣ ಹಣವನ್ನು ಮೃತ ರವಿ ಅವರ ಕುಟುಂಬಕ್ಕೆ ನೀಡದ ಕಾರಣ ಹಾಗೂ ನ್ಯಾಯಾಲಯದ ಆದೇಶ ಪಾಲನೆ ಮಾಡದ ಹಿನ್ನಲೆಯಲ್ಲಿ ಜಪ್ತಿ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದು ಹಿರಿಯ ವಕೀಲ ಬಿ. ರಾಮಕೃಷ್ಣೇಗೌಡ ತಿಳಿಸಿದರು.

ವರದಿ: ಗಿರೀಶ್ ರಾಜ್, ಮಂಡ್ಯ

Share.
Exit mobile version