ಬೆಂಗಳೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಜೈಲಿನಲ್ಲಿರುವ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ಹಂಗರಹಳ್ಳಿ ಶ್ರೀವಿದ್ಯಾ ಚೌಡೇಶ್ವರಿ ದೇವಸ್ಥಾನ ಶ್ರೀಮಠದ ಬಾಲ ಮಂಜುನಾಥ ಸ್ವಾಮೀಜಿ ನನಗೆ ಮಲಗಲು ಹಾಸಿಗೆ ಮನೆ ಊಟ ಬೇಕು ಎಂದು ಸಲ್ಲಿಸಿದ್ದ ಮಧ್ಯಂತರ ಮನವಿಗೆ ಹೈಕೋರ್ಟ್ ಅಸ್ತು ಎಂದಿದೆ.

ಜೈಲಿನಲ್ಲಿ ಮಲಗಲು ನನಗೆ ಹಾಸಿಗೆ ಬೇಕು, ಮನೆಯೂಟವೇ ಬೇಕು ಎಂಬ ಈ ಸಂಬಂಧ ತುಮಕೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರು ಗುರುವಾರ ಈ ಕುರಿತಂತೆ ಆದೇಶಿಸಿದರು.

ಅರ್ಜಿದಾರರು ತಮ್ಮ ರಿಸ್ಕ್‌ನಲ್ಲಿ ಮಠದಿಂದ ಅಥವಾ ಮನೆಯಿಂದ ಊಟವನ್ನು ತರಿಸಿಕೊಳ್ಳಬಹುದು. ಆದರೆ, ಅದರ ಅಪಾಯಗಳ ಹೊಣೆಯನ್ನು ತಾವೇ ಹೊರಬೇಕು. ತಂದ ಊಟವನ್ನು ಜೈಲು ಅಧಿಕಾರಿಗಳು ಪರೀಕ್ಷಿಸದ ನಂತರವೇ ಅರ್ಜಿದಾರರು ಸೇವಿಸಲು ಅವಕಾಶ ಕಲ್ಪಿಸಬೇಕು ಅಗತ್ಯವಿದ್ದರೆ ಈ ಆದೇಶದ ಮಾರ್ಪಾಡಿಗೆ ಜೈಲು ಅಧಿಕಾರಿಗಳು ನ್ಯಾಯಾಲಯವನ್ನು ಕೋರಬಹುದು ಎಂದು ನ್ಯಾಯಪೀಠ ಕಾರಾಗೃಹದ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸಿದೆ.

ಪ್ರಕರಣವೇನದ ಹಿನ್ನೆಲೆ?

ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮೀಜಿ ವಿರುದ್ಧ 2024ರ ಮಾರ್ಚ್ 7ರಂದು ದಾಖಲಾಗಿರುವ ದೂರಿನ ಅನುಸಾರ ಪೊಲೀಸರು ಸ್ವಾಮೀಜಿಯನ್ನು ಪೋಕ್ಸ್‌ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಅಡಿಯಲ್ಲಿ ಬಂಧಿಸಲಾಗಿದೆ. ಇವರನ್ನು ಮಾರ್ಚ್ 14ರಂದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

Share.
Exit mobile version