ಮಂಡ್ಯ : ಅಕ್ರಮವಾಗಿ ಮರಳು ದಂಧೆ ತಡೆಯಲು ಹೋದ ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ಸಹಾಯಕನನ್ನು ಭೀಕರವಾಗಿ ಹತ್ಯೆಗೈದಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಸಂಘ ಹಾಗೂ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗದಗ ಜಿಲ್ಲೆಯ ಲಕ್ಷ್ಮಿಶ್ವರ ತಾಲೂಕಿನ ಹುಲ್ಲೂರು ಗ್ರಾಮದ ಸರಹದ್ದಿನಲ್ಲಿ ಅಕ್ರಮವಾಗಿ ಮರಳು ದಂಧೆ ನಿರಂತರವಾಗಿ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮ ಸಹಾಯಕ
ರಫೀಕ್ ಹುಸೇನ್ ಸಾಬ್ ನದಾಫ್ ಕಳೆದ ಆಗಸ್ಟ್ 15 ರಂದು ಮರಳು ದಂಧೆಯನ್ನು ತಡೆಗಟ್ಟಲು ಹೋದಾಗ ದುಷ್ಕರ್ಮಿಗಳು ಹಾಗೂ ರಫೀಕ್ ನಡುವೆ ಮಾತಿನ ಚಕಮಕಿ ನಡೆಸಿ ಬಳಿಕ ಏಕಾಏಕಿ ಅವರ ಮೇಲೆ ಟ್ರಾಕ್ಟರ್ ಹರಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿದರು.
ಈ ಕೂಡಲೇ ಅಲ್ಲಿನ ಪೋಲೀಸ್ ಅಧಿಕಾರಿಗಳು ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಮೃತ ಗ್ರಾಮ ಸಹಾಯಕನ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡುವ ಜೊತೆಗೆ 25 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿ ಮಂಡ್ಯ ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘ, ಮಂಡ್ಯ ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘ ಹಾಗೂ ಗ್ರಾಮ ಸಹಾಯಕರ ಸಂಘ ಜಿಲ್ಲಾಧಿಕಾರಿ ಡಾ.ಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಂಡ್ಯ ಜಿಲ್ಲಾ ಕಂದಾಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಗೌಡ, ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ರಾಜೇಶ್, ಪ್ರಧಾನ ಕಾರ್ಯದರ್ಶಿ ಆಲಕೆರೆ ಶಶಿಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಆರ್.ಗೋವಿಂದರಾಜು ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಶಿವಮೊಗ್ಗ: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಹಣ್ಣು ನೀಡಿ ಕುಶಲೋಪರಿ ವಿಚಾರಣೆ