ಮಂಡ್ಯ : ತೀವ್ರ ಕುತೂಹಲ ಕೆರಳಿಸಿದ್ದ ಮದ್ದೂರು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ ಕೈ ವಶವಾಗಿದ್ದು, ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ಮೈತ್ರಿ ನಾಯಕರು ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜೆಡಿಎಸ್ ನ 12 ಮಂದಿ ಸದಸ್ಯರ ಪೈಕಿ 6 ಮಂದಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಜೆಡಿಎಸ್ – ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಆದರೇ ಕಾಂಗ್ರೆಸ್ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ.
ಕೇವಲ 3 ಮಂದಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಜೊತೆಗೆ 6 ಮಂದಿ ಜೆಡಿಎಸ್, 4 ಪಕ್ಷೇತರ ಹಾಗೂ 1 ಬಿಜೆಪಿ ಸದಸ್ಯರ ಜೊತೆಗೆ ಶಾಸಕ ಕೆ.ಎಂ.ಉದಯ್ ಅವರ ಮತಗಳ ಬೆಂಬಲದೊಂದಿಗೆ ಪುರಸಭೆಯ ಅಧ್ಯಕ್ಷರಾಗಿ ಕೋಕಿಲ ಅರುಣ್ ಹಾಗೂ ಉಪಾಧ್ಯಕ್ಷರಾಗಿ ಟಿ.ಆರ್.ಪ್ರಸನ್ನಕುಮಾರ್ ಅವರುಗಳು 15 ಮತ ಪಡೆದು ಆಯ್ಕೆಯಾಗಿದ್ದು, ಪುರಸಭೆಯ ಅಧಿಕಾರ ಹಿಡಿಯುವಲ್ಲಿ ಕೆ.ಎಂ.ಉದಯ್ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭಾರಾಣಿ, ಉಪಾಧ್ಯಕ್ಷ ಸ್ಥಾನಕ್ಕೆ ಮನೋಜ್ ಕುಮಾರ್ ನಾಮಪತ್ರ ಸಲ್ಲಿಸಿದರು. ಚುನಾವಣಾ ಪ್ರಕ್ರಿಯೆ ಕಾಲಕ್ಕೆ ತಲಾ 8 ಮತಗಳನ್ನು ಪಡೆದು ಪರಾಭವಗೊಂಡರು.
ಪುರಸಭೆ ಒಟ್ಟು 23 ಸದಸ್ಯರ ಸಂಖ್ಯಾಬಲ ಹೊಂದಿದೆ. ಇದರಲ್ಲಿ ಜೆಡಿಎಸ್ 12 ಸದಸ್ಯರು, ಕಾಂಗ್ರೆಸ್ 4 ಸದಸ್ಯರು, ಬಿಜೆಪಿ 1 ಹಾಗೂ 6 ಮಂದಿ ಪಕ್ಷೇತರರು ಗೆಲುವು ಸಾಧಿಸಿ ಮೊದಲನೇ ಬಾರಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಎರಡನೇ ಅವಧಿಗೆ ಇಂದು ನಡೆದ ಚುನಾವಣೆಯಲ್ಲಿ ಮಂದಿ 6 ಜೆಡಿಎಸ್ ಸದಸ್ಯರು ಹಾಗೂ 1 ಬಿಜೆಪಿ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಮೂಲಕ ಮೈತ್ರಿ ನಾಯಕರಿಗೆ ಭಾರೀ ಮುಖಭಂಗ ಉಂಟು ಮಾಡಿದ್ದಾರೆ.
ಇನ್ನು ಹಿಂದಿನ ಅಧಿಕಾರಾವಧಿಯಲ್ಲಿ ಅಧ್ಯಕ್ಷರಾಗಿದ್ದ ಸುರೇಶ್ ಕುಮಾರ್ ಮತದಾನ ಪ್ರಕ್ರಿಯೆಯಿಂದ ಗೈರು ಹಾಜರಾದರು.
ಶಾಸಕ ಕೆ.ಎಂ.ಉದಯ್ ಹೇಳಿದ್ದೇನು?
ಭರ್ಜರಿ ಗೆಲುವಿನ ಬಳಿಕ ಶಾಸಕ ಕೆ.ಎಂ.ಉದಯ್ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್ 6 ಮಂದಿ ಸದಸ್ಯರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ. ಜೆಡಿಎಸ್ – ಬಿಜೆಪಿಯ ಆಂತರಿಕ ಭಿನ್ನಮತ ಏನಿದೆಯೋ ನಮಗೆ ಗೊತ್ತಿಲ್ಲ. ಪಟ್ಟಣದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಸದಸ್ಯರು ಬಾಹ್ಯ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ತುಂಬು ಹೃದಯದ ಸ್ವಾಗತ ಭಯಸುತ್ತೇನೆ ಎಂದರು.
ಇನ್ಮುಂದೆ ಅಡ್ಜೆಸ್ಟ್ಮೆಂಟ್ ರಾಜಕಾರಣ ನಡೆಯಲ್ಲ
ಈ ಹಿಂದೆ ಕ್ಷೇತ್ರದಲ್ಲಿ ಬಹಳಷ್ಟು ಅಡ್ಜೆಸ್ಟ್ಮೆಂಟ್ ರಾಜಕಾರಣ ನಡೆಯುತ್ತಿತ್ತು. ವಿರೋಧ ಪಕ್ಷಕ್ಕೆ ಸಹಾಯ ಮಾಡಿಕೊಂಡು ಬರ್ತಿದ್ರು. ಇವಾಗ ಹೊಸ ಅಧ್ಯಾಯ ಪ್ರಾರಂಭವಾಗಿದೆ. ನಮ್ಮದು ಅಡ್ಜೆಸ್ಟ್ಮೆಂಟ್ ರಾಜಕಾರಣ ಅಲ್ಲ ಎಲ್ಲರು ಸಹಕಾರ ನೀಡಿದ್ದಾರೆ. ಎಲ್ಲಾ ಸದಸ್ಯರ ಸಹಕಾರದಿಂದ ಪುರಸಭೆ ಅಧಿಕಾರ ಹಿಡಿದ್ದಿದ್ದೇವೆ. ನಾವು ಯಾರನ್ನು ಹೈಜಾಕ್ ಮಾಡಿಲ್ಲ. ಹುಡುಗರು ಆದ್ರೆ ಎತ್ತಿಕೊಂಡು ಹೋಗಬಹುದು ಆದರೆ ಎಲ್ಲಾ ಮಹಿಳಾ ಸದಸ್ಯರು ಅಭಿವೃದ್ಧಿ ಉದ್ದೇಶದಿಂದ ಬಾಹ್ಯ ಬೆಂಬಲ ನೀಡಿದ್ದಾರೆ.
ಇನ್ನು ಮುಂದೆ ಮದ್ದೂರು ಪಟ್ಟಣ ಅಭಿವೃದ್ಧಿಯತ್ತ ಸಾಗಲಿದೆ. ಹಿಂದಿನ ವಾತವರಣವೇ ಬೇರೆ ಮುಂದಿನ ವಾತಾವರಣವೇ ಬೇರೆ ನಾವು ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಜನರ ಕೆಲಸವೇ ನನಗೆ ಮುಖ್ಯ ಇನ್ನುಳಿದ ಜೆಡಿಎಸ್ ಸದಸ್ಯರಿಗೆ ನಾನು ಗಾಳ ಹಾಕುವ ಅವಶ್ಯಕತೆ ಇಲ್ಲ. ಅಭಿವೃದ್ಧಿ ಬೇಕು ಅನ್ನೋದಾದರೆ ಸ್ವತಃ ಅವರೇ ಬಂದು ನಮ್ಮ ಜೊತೆ ಕೈ ಜೋಡಿಸಲಿ ಪುರಸಭೆ ಸದಸ್ಯರೆಲ್ಲರೂ ಒಂದೇ ಕುಟುಂಬದಂತೆ ಒಟ್ಟಿಗೆ ಹೋಗ್ತೇವೆ ಎಂದು ಹೇಳಿದರು.
ಇನ್ನು ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಒಲಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಯಾವುದು ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು, ಕೆಪಿಸಿಸಿ ಸದಸ್ಯ ಕದಲೂರು ರಾಮಕೃಷ್ಣ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮುಖಂಡರಾದ ಕೆ.ಆರ್.ಮಹೇಶ್, ಶಂಕರೇಗೌಡ, ಡಾಬಾ ಮಹೇಶ್, ಅರುಣ್ ಕುಮಾರ್, ತೈಲೂರು ರಘು, ವಿಜಯ್ ಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಏನಿದು ‘ನಿಪುಣ ಕರ್ನಾಟಕ’ ಯೋಜನೆ? ಜಾರಿಯಿಂದ ಪ್ರಯೋಜನ ಏನು? ಇಲ್ಲಿದೆ ಪುಲ್ ಡೀಟೆಲ್ಸ್ | Nipuna Karnataka Scheme
BIG NEWS : ನನಗೂ ‘ಸಿಎಂ’ ಆಗುವ ಆಸೆ ಇದೆ ಆದರೆ…?: ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್!