ಸೂರ್ಯಪೇಟೆ (ತೆಲಂಗಾಣ):ಇಂಡಿಕೇಟರ್ ಬಳಸುವ ವಿಚಾರದಲ್ಲಿ ಶುರುವಾದ ಸಣ್ಣ ವಾಗ್ವಾದವು ಪ್ರಾಣಾಪಾಯ ತಂದೊಡ್ಡುವ ಹಂತಕ್ಕೆ ತಲುಪಿದ ಘಟನೆ ತೆಲಂಗಾಣದ ಸೂರ್ಯಪೇಟೆ ಪಟ್ಟಣದಲ್ಲಿ ನಡೆದಿದೆ. ರಸ್ತೆ ಜಗಳದ ಭರದಲ್ಲಿ ಕಾರು ಚಾಲಕನೊಬ್ಬ ವ್ಯಕ್ತಿಯನ್ನು ಕಾರಿನ ಬಾನೆಟ್ ಮೇಲೆಯೇ ಇರಿಸಿಕೊಂಡು ಸುಮಾರು 2 ಕಿಲೋಮೀಟರ್ ವೇಗವಾಗಿ ಚಲಾಯಿಸಿದ್ದಾನೆ.
ಸೂರ್ಯಪೇಟೆ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ಇಂಡಿಕೇಟರ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಆರಂಭವಾಗಿತ್ತು.ವಾಗ್ವಾದ ತಾರಕಕ್ಕೇರಿದಾಗ ಬೈಕ್ ಸವಾರ ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆಕ್ರೋಶಗೊಂಡ ಕಾರು ಚಾಲಕ ಕಾರನ್ನು ನಿಲ್ಲಿಸದೆ ಅವರ ಮೇಲೆ ನುಗ್ಗಿಸಿದ್ದಾನೆ. ಈ ವೇಳೆ ಬೈಕ್ ಸವಾರ ತನ್ನ ಜೀವ ಉಳಿಸಿಕೊಳ್ಳಲು ಕಾರಿನ ಬಾನೆಟ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ.
ಬಾನೆಟ್ ಮೇಲೆ ವ್ಯಕ್ತಿ ನೇತಾಡುತ್ತಿದ್ದರೂ ಚಾಲಕ ಕಾರನ್ನು ಸುಮಾರು 2 ಕಿಲೋಮೀಟರ್ ದೂರದವರೆಗೆ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ದಾರಿಹೋಕರು ಮತ್ತು ಸಾರ್ವಜನಿಕರು ಕಾರನ್ನು ನಿಲ್ಲಿಸುವಂತೆ ಕಿರುಚಿದರೂ ಚಾಲಕ ಕಿವಿಗೊಟ್ಟಿಲ್ಲ.








