ಬೆಂಗಳೂರು: ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ 1494 ಎಕರೆ 38 ಗುಂಟೆ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯ ಸ್ಮರಣೆಯ ದಿನವಾದ ಜನವರಿ 2ರಂದು ವಿಜಯಪುರದಲ್ಲಿ ವಿಧ್ಯುಕ್ತವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಫಲಕವನ್ನು ಅನಾವರಣ ಮಾಡಲಾಗುವುದು ಎಂದು ತಿಳಿಸಿದರು.
ವಿವಿಧ ಕಾಲಾವಧಿಯಲ್ಲಿ ಮಮದಾಪುರ ಭಾಗದಲ್ಲಿನ ಅರಣ್ಯ ಪ್ರದೇಶಗಳ ಅಧಿಸೂಚನೆಯಾಗಿದ್ದು, ಪ್ರಸ್ತುತ ಸುಮಾರು 1494 ಎಕರೆ 38 ಗುಂಟೆ ವಿಸ್ತೀರ್ಣದ ಅರಣ್ಯವಿದೆ. ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಮತ್ತು ಸಸ್ಯ ಸಂಕುಲದಿಂದ ಕೂಡಿರುವ ಶ್ರೀಮಂತ ಜೀವವೈವಿಧ್ಯತೆಯ ಈ ತಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವೀಧ್ಯ ಪಾರಂಪರಿಕ ತಾಣ ಎಂದು ಜೀವವೈವಿಧ್ಯ ಕಾಯಿದೆ 2022ರ ಸೆಕ್ಷನ್ 37ರನ್ವಯ ಮರು ನಾಮಕರಣ ಮಾಡಲಾಗುತ್ತಿದೆ.
ಮಮದಾಪುರದ ಅಧಿಸೂಚಿತ ಅರಣ್ಯ ಎಲೆ ಉದುರುವ ಕಾಡು ಮತ್ತು ಕುರುಚಲು ಕಾಡುಗಳಿಂದ ಕೂಡಿದ ಪ್ರದೇಶವಾಗಿದ್ದು, ಚಿರತೆಗಳು, ನರಿಗಳು, ಕತ್ತೆ ಕಿರುಬಗಳು ಮತ್ತು ಹಲವಾರು ಪ್ರಭೇದದ ಪಕ್ಷಿಗಳತಾಣವಾಗಿದೆ. ಸಸ್ಯ ಸಂಕುಲ, ಕೀಟ ಸಂಕುಲದ ನೆಲೆವೀಡೂ ಆಗಿದೆ.
ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ಅರಣ್ಯ ಪ್ರದೇಶವೇ ಕಡಿಮೆ ಇದ್ದು, ಇರುವ ವನ ಪ್ರದೇಶವನ್ನು ಮತ್ತು ಇಲ್ಲಿನ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು ಇಂದಿನ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಸಿದ್ಧೇಶ್ವರ ಶ್ರೀಗಳ ಹೆಸರನ್ನು ಈ ಕಾನನ ಪ್ರದೇಶಕ್ಕೆ ಇಡುವುದರಿಂದ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲೂ ನೆರವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈ ಪಾರಂಪರಿಕ ಜೀವವೈವಿಧ್ಯ ತಾಣಕ್ಕೆ ಸಮುದಾಯ ಬೆಂಬಲವೂ ಲಭಿಸಲಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು, ಪರಿಸರದ ಆರೋಗ್ಯವು ಜನರ ಯೋಗಕ್ಷೇಮಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಪ್ರತಿಪಾದಿಸುತ್ತಿದ್ದರು. ಮಾನವ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕು ಎಂದು ಹೇಳುತ್ತಿದ್ದರು. ಅವರ ಈ ನುಡಿಗಳು, ಇಂದಿಗೂ, ಎಂದೆಂದಿಗೂ ಸಾರ್ವಕಾಲಿಕವಾಗಿದ್ದು ಎಂದು ತಿಳಿಸಿದರು.
ಈ ಜೀವ ವೈವಿಧ್ಯತೆಯ ಅರಣ್ಯಕ್ಕೆ ಅವರ ಹೆಸರು ಇಡುವುದರಿಂದ ನಾಡಿನ ಜನರಲ್ಲಿ ಅದರಲ್ಲೂ ವಿಜಯಪುರ ಭಾಗದ ಜನರಲ್ಲಿ ಜೀವವೈವಿಧ್ಯತೆಯ ಸಂರಕ್ಷಣೆಯ ಅರಿವು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಮಮದಾಪುರ ಗ್ರಾಮದ ಅಧಿಸೂಚಿತ ಅರಣ್ಯಗಳನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆಯ ತಾಣವೆಂದು ಘೋಷಿಸುವ ಮೂಲಕ ರಾಜ್ಯ ಸರ್ಕಾರವು ಶ್ರೀಗಳ ಪರಿಸರ ಕಾಳಜಿಯನ್ನು ಗೌರವಿಸಿದೆ ಹಾಗೂ ಅವರ ತತ್ವಗಳು ಈ ಪ್ರಮುಖ ಪರಿಸರ ಪ್ರದೇಶದ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆಗೆ ಮಾರ್ಗದರ್ಶಿಯಾಗಿರುತ್ತದೆ ಎಂದು ವಿವರಿಸಿದರು.
ಪಾರಂಪರಿಕ ತಾಣ ಘೋಷಣೆಯಿಂದ ಸ್ಥಳೀಯ ಜನರ ಅಥವಾ ಈ ಕಾಡನ್ನು ಅವಲಂಬಿಸಿರುವ ಆದಿವಾಸಿಗಳ ದೈನಂದಿನ ಬದುಕಿನ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಾರಂಪರಿಕ ತಾಣದ ನಿರ್ವಹಣೆಯಲ್ಲಿ ಸ್ಥಳೀಯ ಜನರು ಸಂಪೂರ್ಣ ಪಾಲ್ಗೊಳ್ಳಲು ನೆರವಾಗುತ್ತದೆ ಎಂದೂ ಹೇಳಿದರು.
ಆದರೆ, ಜೀವವೈವಿಧ್ಯತೆಯ ಸಂರಕ್ಷಣೆಗೆ ಬಾಧಕವಾಗುವ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ ಮೋಹನ್ ರಾಜ್ ಉಪಸ್ಥಿತರಿದ್ದರು.
BREAKING: ಚನ್ನಪಟ್ಟಣದಲ್ಲಿ ಎಸಿ ನೇತೃತ್ವದಲ್ಲಿ ಚುನಾವಣಾ ಸಭೆಯ ಮೇಲೆ ದಾಳಿ: ಬಾಡೂಟ ಸೀಜ್
ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ ಗುಡ್ ನ್ಯೂಸ್: 1.50 ಲಕ್ಷ ಸಬ್ಸಿಡಿಯೊಂದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ