ಬೆಂಗಳೂರು: ಬಿಜೆಪಿ, ಆರ್ ಎಸ್ ಎಸ್ ಅಂಬೇಡ್ಕರ್ ಶತ್ರುಗಳು ಎಂಬುದಾಗಿ ಹೇಳಿದ್ದಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ನೀವೊಬ್ಬ ಗೊಬೆಲ್ಸ್ ಆಗಬೇಡಿ ಅಂತ ಕಿವಿಮಾತು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವಂತ ಅವರು..
“ಬಿಜೆಪಿ, ಆರ್ ಎಸ್ ಎಸ್ ಅಂಬೇಡ್ಕರ್ ಶತ್ರುಗಳು”
ಎಂಬುದಾಗಿ ಕಾಂಗ್ರೆಸ್ ಪಕ್ಷದ ಘನತೆವೆತ್ತ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಆಧಾರವಿಲ್ಲದ ದಿವ್ಯ ತೀರ್ಪು ನೀಡಿದ್ದಾರೆ.
ಖರ್ಗೆ ಅವರಿಗೆ 5 ಪ್ರಶ್ನೆ ಗಳು.
1 *ಬಾಬಾ ಸಾಹೇಬ್ ಅಂಬೇಡ್ಕರ್ ರಿಗೆ ಅವರು ಬದುಕಿದ್ದಾಗ ಮತ್ತು ಅವರು ತೀರಿ ಹೋದ ನಂತರ ತೀವ್ರ ಅವಮಾನ ಮಾಡಿದ ಕೀರ್ತಿ ಯಾರಿಗೆ ಸಲ್ಲಬೇಕು?
2 * ಬಾಬಾಸಾಹೇಬ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರನ್ನು ಸೋಲಿಸಲೇಬೇಕೆಂದು ಎಲ್ಲಾ ತಂತ್ರ ಉಪಯೋಗಿಸಿ ಶತಾಯಗತಾಯ ಪ್ರಯತ್ನಿಸಿ ಯಶಸ್ವಿಯಾಗಿದ್ದು ಯಾವ ರಾಜಕೀಯ ಪಕ್ಷ?
3 * ಬಾಬಾಸಾಹೇಬ ಅಂಬೇಡ್ಕರ್ ಅವರು ಚುನಾವಣೆ ನಿಂತಾಗ ಅವರಿಗೆ ಎಲೆಕ್ಷನ್ ಪ್ರಮುಖರಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿ ಯಾರು?
4 * ಅ) ರಾಷ್ಟ್ರದ ಪ್ರಥಮ ಪ್ರಧಾನಿ ಶ್ರೀ ಜವಾಹರ್ ಲಾಲ್ ನೆಹರು ತೀರಿಕೊಂಡದ್ದು 1964 ರಲ್ಲಿ. ಅವರಿಗೆ ಭಾರತರತ್ನ ಪ್ರಶಸ್ತಿ ಬಂದದ್ದು 1955 ರಲ್ಲಿ.
ಆ) ಭಾರತದ ಮತ್ತೋರ್ವ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ದಾರುಣ ಹತ್ಯೆ ಯಾಗಿದ್ದು 1984 ರಲ್ಲಿ. ಆದರೆ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದದ್ದು 1971 ರಲ್ಲಿ.
ಇ) ನಮ್ಮ ಇನ್ನೋರ್ವ ಪ್ರಧಾನಮಂತ್ರಿ ರಾಜೀವ್ ಗಾಂಧಿ ರವರು ನಮ್ಮಿಂದ ದೂರವಾದದ್ದು 1991ರಲ್ಲಿ. ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿದ್ದು 1991 ರಲ್ಲಿಯೇ!
ಈ) ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ತೀರಿಕೊಂಡದ್ದು 1956 ರಲ್ಲಿ. ಅವರಿಗೆ ಭಾರತದ ರತ್ನ ಪ್ರಶಸ್ತಿ ದೊರಕಿದ್ದು 34 ವರ್ಷಗಳ ನಂತರ, ಅಂದರೆ 1990 ರಲ್ಲಿ. ಅದೂ, ಬಿಜೆಪಿ ಬಾಹ್ಯ ಬೆಂಬಲ ನೀಡಿದ್ದ ಶ್ರೀ ವಿ ಪಿ ಸಿಂಗ್ ರವರು ಪ್ರಧಾನ ಮಂತ್ರಿಗಳಾಗಿದ್ದಾಗ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸುಮಾರು 34 ವರ್ಷಗಳಷ್ಟು ದೀರ್ಘ ಕಾಲ “ಭಾರತ ರತ್ನ” ಪ್ರಶಸ್ತಿ ನೀಡುವಲ್ಲಿ ವಿಳಂಬ ಮಾಡಿದ ಅಥವಾ ತಿರಸ್ಕಾರ ಮಾಡಿದ ಶ್ರೇಯಸ್ಸು ಯಾವ ಪಕ್ಷದ್ದು?
5 * ಬಾಬಾಸಾಹೇಬ್ ಅಂಬೇಡ್ಕರ್ ತೀರಿಕೊಂಡಾಗ ದೆಹಲಿಯಲ್ಲಿ ಅವರ ಸ್ಮಾರಕ ನಿರ್ಮಾಣವಾಗದಂತೆ ನೋಡಿಕೊಂಡ ಸಾಹಸ ಯಾರದ್ದು.
~~~~~~~
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ 4 ಸರಳ ಪ್ರಶ್ನೆಗಳಿಗೆ ಉತ್ತರ ನೀಡಲು ಅವರ ಆತ್ಮಸಾಕ್ಷಿ ಸಹಕರಿಸುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ ಮೂರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗುತ್ತಿದೆ.
* ಮೊದಲನೇ ಪ್ರಶ್ನೆಗೆ ಉತ್ತರ : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬದುಕಿದ್ದಾಗ ಹಾಗೂ ಮರಣ ಹೊಂದಿದ ಮೇಲು ತೀವ್ರ ಅವಮಾನ ಮಾಡಿದ ಕುಖ್ಯಾತಿ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ್ದೇ!
* ಎರಡನೆಯ ಪ್ರಶ್ನೆಗೆ ಉತ್ತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಗಳಲ್ಲಿ ಸೋಲಿಸಲು ತೀವ್ರ ಪ್ರಯತ್ನ ಮಾಡಿ ಎಲ್ಲಾ ಮಾರ್ಗಗಳನ್ನು ಉಪಯೋಗಿಸಿ ಯಶಸ್ವಿಯಾದ ಶ್ರೇಯಸ್ಸು one and only congress party ಯದು.
* ಮೂರನೇ ಪ್ರಶ್ನೆಗೆ ಉತ್ತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ, ಭಾರತೀಯ ಮಜ್ದೂರ್ ಸಂಘದ ಸ್ಥಾಪಕರಾದ ದತ್ತೋಪಂಥ್ ಥೆಂಗಡಿ ರವರು ಅಂಬೇಡ್ಕರ್ ಅವರ ಚುನಾವಣಾ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು.
* ನಾಲ್ಕನೆಯ ಪ್ರಶ್ನೆಗೆ ಉತ್ತರ : –
ಒಂದು ಕುಟುಂಬದ ಮೂರು ವ್ಯಕ್ತಿಗಳಿಗೆ ಭಾರತರತ್ನ ಪ್ರಶಸ್ತಿ ನೀಡಲು ಧಾವಂತ ತೋರಿ ಸಂವಿಧಾನ ಶಿಲ್ಪಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಉದಾಸೀನ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು ಎಂಬುದು ಅತ್ಯಂತ ಸ್ಪಷ್ಟ.
5 * 5ನೇ ಪ್ರಶ್ನೆಯ ಉತ್ತರದ ರೂವಾರಿಯೂ ಅಂದಿನ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷದ ಸರ್ಕಾರ ಎಂಬುದು ದೇಶಕ್ಕೆ ಗೊತ್ತಿರುವ ಸತ್ಯ.
ಈಗ ಹೇಳಿ ಖರ್ಗೆ ಅವರೇ! ಅಂಬೇಡ್ಕರ್ ಅವರ ಶತ್ರು ಯಾರಾಗಿದ್ದರು ಎಂದು!
ಇದೆಲ್ಲವೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿದಿದ್ದರೂ, ಆತ್ಮಸಾಕ್ಷಿಯ ಅಭಾವದಿಂದ, ಕುಟುಂಬದ ಮೇಲಿನ ವ್ಯಾಮೋಹದಿಂದ ಖರ್ಗೆಯವರು ಈ ಸತ್ಯ ನುಡಿಯಲಾರರು.
ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನವನ್ನು ಗೌರವಿಸಿ, ಕಿರಿಯನಾಗಿ ಅವರಿಗೊಂದು ಕಿವಿ ಮಾತು ನೀವು ಮತ್ತೊಬ್ಬ ಗೊಬೆಲ್ಸ್ ಆಗಬೇಡಿ.
ಸುಖಾ ಸುಮ್ಮನೆ ಎಲ್ಲಾ ವಿಚಾರಗಳಲ್ಲಿಯೂ ವಿಷ ಕಾರುವ ಪ್ರವೃತ್ತಿ ನಿಲ್ಲಲಿ ಎಂಬುದಾಗಿ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೀದರ್ ನಲ್ಲಿ ಜಡ್ಜ್ ಮನೆಗೆ ಕನ್ನಹಾಕಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಅರೆಸ್ಟ್