ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಂದ ದೂರು ಸ್ವೀಕರಿಸಲು ವಿಳಂಬ ಮಾಡಿದ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ವೃತ್ತ ನಿರೀಕ್ಷಕ (ಸಿಪಿಐ) ಪುಲ್ಲಯ್ಯ ರಾಥೋಡ್ ಅವರ ಕ್ರಮವನ್ನು ಖಂಡಿಸಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಅವರು ಇಂದು ಸಾಗರ ಪೇಟೆ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.
ಘಟನೆಯ ಹಿನ್ನೆಲೆ:
ಇಂದು ಬೆಳಿಗ್ಗೆ ಸಾಗರ ಪಟ್ಟಣದ ಸಿಗಂದೂರು ರಸ್ತೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಹುಲಿಮನೆ ಗ್ರಾಮದ ಲಕ್ಷ್ಮಣ (65) ಎಂಬುವವರಿಗೆ ಎದುರಿನಿಂದ ಬಂದ ಕ್ರೇನ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಲಕ್ಷ್ಮಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ದೂರು ನೀಡಲು ಮೃತರ ಸಂಬಂಧಿಕರು ಸಾಗರ ಪೇಟೆ ಠಾಣೆಗೆ ಬಂದಾಗ, ಸಿಪಿಐ ಪುಲ್ಲಯ್ಯ ರಾಥೋಡ್ ಅವರು ದೂರು ಪಡೆಯಲು ವಿಳಂಬ ಮಾಡಿ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಲ್ಲಿಕಾರ್ಜುನ ಹಕ್ರೆಗೆ ಬಂಧನದ ಬೆದರಿಕೆ:
ವಿಷಯ ತಿಳಿದು ಠಾಣೆಗೆ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಅವರು ಆಗಮಿಸಿ ದೂರು ಪಡೆಯಲು ಏಕೆ ವಿಳಂಬ ಎಂಬುದಾಗಿ ಪ್ರಶ್ನಿಸಿದಾಗ, ಸಿಪಿಐ ಅವರು ಹಕ್ರೆ ಅವರ ಮೇಲೆ ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, “ನಿಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಲ್ಲಿಕಾರ್ಜುನ ಹಕ್ರೆ ದೂರಿದ್ದಾರೆ.
ಪ್ರತಿಭಟನಾಕಾರರ ಗಂಭೀರ ಆರೋಪಗಳು:
ಇಂದು ಸಾಗರ ಪೇಟೆ ಠಾಣೆ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಹಕ್ರೆ ಅವರು ಈ ಕೆಳಗಿನ ಆರೋಪಗಳನ್ನು ಮಾಡಿದ್ದಾರೆ:
-
ಹಣ ವಸೂಲಿಯ ಸಂಚು: ಮೃತ ವ್ಯಕ್ತಿಯ ಕುಟುಂಬಸ್ಥರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದಲೇ ದೂರು ಸ್ವೀಕರಿಸಲು ವಿಳಂಬ ಮಾಡಲಾಗಿದೆ.
-
ಅಸಭ್ಯ ವರ್ತನೆ: ಜನಪರ ಹೋರಾಟಗಾರನಾದ ನನ್ನ ಮೇಲೆ ಕೆಟ್ಟ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ ಮತ್ತು ಹಲ್ಲೆಗೆ ಮುಂದಾಗಿದ್ದಾರೆ.
-
ತಾರತಮ್ಯ: ಮೃತ ಲಕ್ಷ್ಮಣ ಅವರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದರಿಂದಲೇ ಹೀಗೆ ನಡೆಸಿಕೊಳ್ಳಲಾಗಿದೆಯೇ? ಎಂದು ಹಕ್ರೆ ಪ್ರಶ್ನಿಸಿದ್ದಾರೆ.
ನಾನು ಯಾವುದೇ ಸಂವಿಧಾನ ವಿರೋಧಿ ಪದ ಬಳಸಿಲ್ಲ. ಸಂವಿಧಾನಾತ್ಮಕವಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ದರ್ಪ ತೋರಿದ್ದಾರೆ. ಕೂಡಲೇ ಕರ್ತವ್ಯಲೋಪ ಎಸಗಿದ ಸಾಗರ ಪೇಟೆ ಠಾಣೆಯ ಸಿಪಿಐ ಪುಲ್ಲಯ್ಯ ರಾಥೋಡ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಂದ್ರು ಹುಲಿಮನೆ, ವಿರೂಪಾಕ್ಷ, ಅರುಣ ಪೂಜಾರಿ, ಮಾಪು ಇಕ್ಕೇರಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ ಸಂಪಾದಕರು…
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2: ಏ.18ರವರೆಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ ವಿಸ್ತರಣೆ
BIG BREAKING: ಕ್ಷೇತ್ರ ಪುನರ್ವಿಂಗಡಣೆ ನಂತರ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆ: ಅಮಿತ್ ಶಾ ಮಾಹಿತಿ
ಸಿನಿಮಾ ಪೈರಸಿಗೆ ಬ್ರೇಕ್: ‘ಜನ ನಾಯಕನ್’ ಚಿತ್ರದ ಅಕ್ರಮ ಪ್ರಸಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ!








