ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿ ಬಂದಾಗಿನಿಂದ ಮಾಲ್ಡೀವ್ಸ್ನ ರಾಜಕೀಯ ನಾಯಕರ ಹೊಟ್ಟೆಗೆ ಹುಳ ಬಿಟ್ಟಂತಾಗಿದೆ. ಲಕ್ಷದ್ವೀಪದ ಸೌಂದರ್ಯವನ್ನು ಸವಿದು ಅಲ್ಲಿನ ಪ್ರವಾಸೋದ್ಯಮ ಬಗ್ಗೆ ಮೋದಿ ಪ್ರಚಾರ ಮಾಡಿದ್ದೇ ತಡ ಮಾಲ್ಡೀವ್ಸ್ನಲ್ಲಿ ಬೆಂಕಿ ಹೊತ್ತಿಕೊಂಡಿತು. ಏಕೆಂದರೆ, ಮಾಲ್ಡೀವ್ಸ್ನ ಇಡೀ ಆದಾಯ ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಅದರಲ್ಲೂ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳುತ್ತಾರೆ.
ಯಾವಾಗ ಮೋದಿ ಲಕ್ಷದ್ವೀಪಕ್ಕೆ ಹೊಗಿ ಬಂದರೋ ಇದನ್ನು ಅರಗಿಸಿಕೊಳ್ಳಲಾಗದೇ ಭಾರತ ಮತ್ತು ಮೋದಿ ಬಗ್ಗೆ ಮಾಲ್ಡೀವ್ಸ್ ರಾಜಕೀಯ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು. ಇದೀಗ ಈ ಬೆಳವಣಿಗೆ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಇರಲಾರದೆ ಇರುವೆ ಬಿಟ್ಟುಕೊಂಡರು ಎಂಬತಾಗಿದೆ ಮಾಲ್ಡೀವ್ಸ್ ಪರಿಸ್ಥಿತಿ. ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಒಂದೆಡೆಯಾದರೆ, ಸೆಲೆಬ್ರಿಟಿಗಳು ಕೂಡ ಮಾಲ್ಡೀವ್ಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ನಾಲಿಗೆ ಹರಿಬಿಟ್ಟ ರಾಜಕೀಯ ನಾಯಕರ ವಿರುದ್ಧ ಅಲ್ಲಿನ ಸರ್ಕಾರ ಕ್ರಮ ಕೈಗೊಂಡರು ಭಾರತೀಯರು ಮಾತ್ರ ಮಾಲ್ಡೀವ್ಸ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇನ್ನು ಸದಾ ತಮ್ಮ ವಿಭಿನ್ನ ಟ್ವೀಟ್ಗಳ ಮೂಲಕ ಎಲ್ಲರ ಗಮನ ಸೆಳೆಯುವ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಸಹ ಮಾಲ್ಡೀವ್ಸ್ಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಅದು ಉಡುಪಿಯ ಸುಂದರ ಕಡಲ ತೀರಗಳಾಗಿರಲಿ, ಪಾಂಡಿಚೇರಿಯ ಪ್ಯಾರಡೈಸ್ ಬೀಚ್, ಅಂಡಮಾನ್ನಲ್ಲಿರುವ ನೀಲ್ ಮತ್ತು ಹ್ಯಾವ್ಲಾಕ್ ಬೀಚ್ ಆಗಿರಲಿ ನಮ್ಮ ದೇಶಾದ್ಯಂತ ಅನೇಕ ಸುಂದರ ಸಮುದ್ರ ತೀರಗಳಿವೆ. ಅಲ್ಲದೆ, ಭಾತರದಲ್ಲಿ ಇನ್ನೂ ಅನ್ವೇಷಿಸಿದ ಅನೇಕ ಸ್ಥಳಗಳಿವೆ. ಕೆಲವು ಮೂಲಸೌಕರ್ಯ ಬೆಂಬಲದೊಂದಿಗೆ ಇವು ತುಂಬಾ ಸಾಮರ್ಥ್ಯಗಳನ್ನು ಹೊಂದಿವೆ. ಎಲ್ಲ ದುರಂತಗಳನ್ನು ಅವಕಾಶವನ್ನಾಗಿ ಪರಿವರ್ತಿಸುವುದು ಭಾರತಕ್ಕೆ ತಿಳಿದಿದೆ. ನಮ್ಮ ಪ್ರಧಾನಿ ಮತ್ತು ನಮ್ಮ ದೇಶದ ವಿರುದ್ಧ ಮಾಲ್ಡೀವ್ಸ್ ಸಚಿವರ ವಾಗ್ದಾಳಿಯು ನಮ್ಮ ಭಾರತಕ್ಕೆ ಒಂದು ಉತ್ತಮ ಅವಕಾಶವಾಗಿದೆ. ನಮ್ಮ ದೇಶದ ಪ್ರವಾಸಿ ತಾಣಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ನಮ್ಮ ಆರ್ಥಿಕತೆಗೆ ಉತ್ತೇಜನ ನೀಡಿ. ನಿಮ್ಮ ನೆಚ್ಚಿನ ಮತ್ತು ಸುಂದರ ತಾಣಗಳನ್ನು ದಯವಿಟ್ಟು ಹೆಸರಿಸಿ ಎಂದು ವಿರೂ ಎಕ್ಸ್ ಖಾತೆಯ ಮೂಲಕ ಭಾರತೀಯರಿಗೆ ಕರೆ ಕೊಟ್ಟಿದ್ದಾರೆ. ಕಡಲತಡಿಯ ಪ್ರವಾಸೋದ್ಯಮವನ್ನೇ ದೊಡ್ಡ ಆದಾಯವಾಗಿ ಹೊಂದಿರುವ ಮಾಲ್ದೀವ್ಸ್, ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಗಿದೆಯಾಗಿದೆ.